ವಯಸ್ಸಾಯಿತು, ಮರೆವು ಶುರುವಾಯ್ತು?

ವಯಸ್ಸಾಯಿತು ಎಂದ ಮಾತ್ರಕ್ಕೆ ಹಿಂದಿನ ದಿನಗಳ ನೆನಪು ಮಾಸಿ ಹೋಗಬೇಕು ಎಂದೇನೂ ಇಲ್ಲ. ಹಿರಿಯರ ಈ ಮರೆವಿನ ಕುರಿತು ಕುಟುಂಬದವರು ನಿಗಾವಹಿಸದೇ ಇದ್ದರೆ, ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ಡಿಮೆನ್ಷಿಯ ದಿನ (ಸೆಪ್ಟೆಂಬರ್ ೨೧) ಸಂದರ್ಭದಲ್ಲಿ ಸ್ವಾನುಭವದ ವಿವರಗಳ ಮೂಲಕ ಎಚ್ಚರಿಸಿದ್ದಾರೆ ರಮಾಮಣಿ ಪ್ರಭಾಕ‌ರ್.‌

ನ್ನ ಮಾವನವರಿಗೆ ರಕ್ತದ ಒತ್ತಡ (BP) ಶುರುವಾಗಿದ್ದು ಬಹಳ ಬೇಗ. ಅದರ ಬಗ್ಗೆ ಕಾಳಜಿ ತೆಗೆದುಕೊಂಡರೂ ಆಹಾರ ತಿನ್ನುವುದರಲ್ಲಿ ಮಿತಿ ಇರಲಿಲ್ಲ. ಹಾಗಾಗಿ ಆಗಾಗ್ಗೆ ಹುಷಾರು ತಪ್ಪುತ್ತಿತ್ತು. ಕೆಲ ವರ್ಷಗಳ ನಂತರ ಏನೇ ಆಗಲಿ, ಆರೋಗ್ಯ ವಿಮೆ ಪಾಲಿಸಿ ತೆಗೆದುಕೊಂಡು ಬಿಡೋಣ ಎಂದು ಅವರಿಗೆ ಪೂರ್ಣ ವೈದ್ಯಕೀಯ ತಪಾಸಣೆ ಮಾಡಿಸಿದಾಗ ಸಕ್ಕರೆ ಖಾಯಿಲೆ ಹೆಚ್ಚು ಇರುವುದು ಖಚಿತಪಟ್ಟಿತು. ಆಗ ಅವರಿಗೆ ೭೦ ವರ್ಷ. BP ಜೊತೆ ಸಕ್ಕರೆ ಖಾಯಿಲೆ ಮಾತ್ರೆ ತೆಗೆದುಕೊಳ್ಳಬೇಕಿತ್ತು. ಬೆಳಿಗ್ಗೆ ಮತ್ತು ರಾತ್ರಿ ತಲಾ ೪ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಮರೆಯುತ್ತಿದ್ದರು.

ಅದಾದ ನಂತರ ಹೊರಗೆ ಹೋಗುವಾಗ ಮನೆ ಬೀಗ ಹಾಕುವುದು ಮರೆಯುತ್ತಿದ್ದರು. ಬಹಳ ಇಷ್ಟಪಡುತ್ತಿದ್ದ ವಾರ್ತೆಯನ್ನು ಕೇಳುವುದು, ದಿನಪತ್ರಿಕೆ ಓದುವುದರಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಅಚ್ಚುಕಟ್ಟಾಗಿ ಉಡುಪುಗಳನ್ನು ಧರಿಸುವುದರಲ್ಲಿ ಆಸಕ್ತಿ ಕಡಿಮೆ ಆಗುತ್ತಿತ್ತು, ಶರ್ಟಿನ ಗುಂಡಿಗಳನ್ನು ಸರಿಯಾಗಿ ಹಾಕುತ್ತಿರಲಿಲ್ಲ, ಟಿ.ವಿ. ನೋಡುವಾಗ ಬಹಳ ಭಾವುಕರಾಗುತ್ತಿದ್ದರು. ಸ್ವಾಭಿಮಾನಿಯಾದ ಅವರೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಅಡಿಗೆಯಲ್ಲಿ ಅವರು ಭೀಮಸೇನ ನಳಮಹಾರಾಜ ವಂಶಸ್ಥರೇ, ಪಾತ್ರೆಗಳನ್ನೂ ತೊಳೆದುಕೊಂಡು ಅವರ ಬಟ್ಟೆಯನ್ನೂ ಸ್ವಚ್ಛವಾಗಿ ಒಗೆದುಕೊಳ್ಳುತ್ತಿದ್ದರು. ಆದರೆ ನಂತರದಲ್ಲಿ ಏನೋ ಆಲಸ್ಯ ಶುರುವಾಗಿ ಹಣ ಜೋಪಾನ ಮಾಡಲು ಕಷ್ಟಪಡುತ್ತಿದ್ದರು, ಅನೇಕ ಬಾರಿ ಹಣ ಎಲ್ಲೆಲ್ಲಿಯೋ ಇಟ್ಟು ಮರೆತು ಕಳೆದುಕೊಂಡಿದ್ದರು, ಹಲವು ಸಲ ಊರುಗಳ, ವ್ಯಕ್ತಿಗಳ ಹೆಸರುಗಳನ್ನು ಮರೆತು, ಏನೋ ಹೆಸರು ಚೆನ್ನಾಗಿದೆ, ಆದರೆ ನೆನಪಾಗುತ್ತಿಲ್ಲ ಎನ್ನುವುದನ್ನು ಗಮನಿಸಿದಾಗ ಅವರ ನೆನಪಿನ ಶಕ್ತಿ ಕಡಿಮೆ ಆಗುತ್ತಿರುವುದು ತೋರಿಬರುತ್ತಿತ್ತು. ಅವರಿಗೆ ೭೫ ವರ್ಷವಾದಾಗ ಡಿಮೆನ್ಷಿಯಾ ಇರುವುದು ಖಚಿತವಾಯಿತು.

ಇದಾಗಿ ೩ ವರ್ಷಕ್ಕೆ ಮಾವನವರಿಗೆ `Brain Stroke’ ಆಗಿತ್ತು. ಭಾಷೆಯನ್ನು ನಿಯಂತ್ರಿಸುವ ಮೆದುಳಿನ ಎಡಭಾಗಕ್ಕೆ ಆಘಾತವಾಗಿತ್ತು. ಜೇಮ್ಸ್ ಬಾಂಡ್ ಸಿನಿಮಾದ ನಟ ಸೀನ್ ಕೊನೆರಿ ನಿಧನರಾದಾಗ ವಿಷಯ ತಿಳಿದ ಮಾವನವರು, ಅವನು ನಟಿಸಿದ ಸಿನಿಮಾಗಳನ್ನು ನೋಡಿದ್ದೇನೆ. ಎಂದು ಹೇಳಿ “You only live twice’, ‘From Russia with Love’ ಸಿನಿಮಾದ ಹೆಸರುಗಳನ್ನು ಹೇಳಿದರು. ೮೪ರ ಇಳಿ ವಯಸ್ಸಿ ನಲ್ಲಿಯೂ ಸುಮಾರು ೫೦ ವರ್ಷಗಳಷ್ಟು ಹಳೆಯ ನೆನಪುಗಳು ಎಷ್ಟು ಹಸಿರಾಗಿದ್ದವು ಎಂದು ನಮಗೆ ಅಚ್ಚರಿಯಾಗಿತ್ತು. ಅದರಲ್ಲೂ ಮೆದುಳಿನ ಆಘಾತದಿಂದ ಚೇತರಿಸಿಕೊಂಡವರಿಗೆ, ೬ ವರ್ಷಗಳ ನಂತರ ಅಷ್ಟು ಹಳೆಯ ವಿಷಯಗಳು ಹೇಗೆ ನೆನಪಿನಲ್ಲಿರಲು ಸಾಧ್ಯ?

೨೦೧೪ರಲ್ಲಿ ಬ್ರೇನ್‌ ಸ್ಟೋಕ್ ಆದಾಗಿನಿಂದ ೨೦೨೦ರವರೆಗೆ ಮಾವನವರ ಯಾವ ಯಾವ ಮುಖ್ಯ ಚಟುವಟಿಕೆಗಳು ಅವರ ಮತ್ತು ನಮ್ಮ ಮೆದುಳನ್ನೂ ಚುರುಕಾಗಿ ಇಟ್ಟವು. ಅವುಗಳ ಕೆಲವು ನೆನಪುಗಳನ್ನು ಮೆಲುಕು ಹಾಕಿದಾಗ ಎಷ್ಟೆಲ್ಲ ವಿಷಯಗಳು ಗೋಚರವಾದವು! ವಯಸ್ಸಾದರೆ ಕಾಡುವುದು ಮರೆವು ನಿಜ. ಆದರೆ ಆ ಮೆದುಳಿಗೇ ಸವಾಲಾಗಿ ಅದನ್ನು ಪೋಷಿಸುವುದರಲ್ಲಿ, ಡಿಮೆನ್ಷಿಯದಿಂದ ಬಳಲುವವರನ್ನು ಮೊದಲಿನಿಂದಲೇ ಎಚ್ಚರದಿಂದ ನೋಡಿಕೊಳ್ಳುವುದರಲ್ಲಿರುವ ನಮ್ಮೆಲ್ಲರ ಜವಾಬ್ದಾರಿಗಳ ಬಗೆಗಿನ ಚಿಂತನೆ ಮತ್ತು ಮಾವನವರ ಅಸಾಮಾನ್ಯ ವ್ಯಕ್ತಿತ್ವದ ಒಂದು ಪರಿಚಯ ಈ ಲೇಖನದ ವಸ್ತುವಾಗಿದೆ.

ಗ್ರಹಣ ಶಕ್ತಿ ಮತ್ತು ಆತ್ಮ ವಿಶ್ವಾಸ:
ಲಕ್ಷ್ಮೀಪುರಂ, ಚಿತ್ತೂರು ಜಿಲ್ಲೆ, ಕುಪ್ಪಂ ಹತ್ತಿರದ ಒಂದು ಸಣ್ಣ ಹಳ್ಳಿ. ಶೇಷಾದ್ರಿ, ಮಾವನ ಬಾಲ್ಯ ಸ್ನೇಹಿತ ಮತ್ತು ಸಹಪಾಠಿ. ಅವರ ಮನೆಗಳು ಅಕ್ಕ ಪಕ್ಕದಲ್ಲೇ ಇದ್ದವು. ಆಗ ಮಾವನವರು ೫ ಅಥವಾ ೬ ನೇ ತರಗತಿ ಇರಬಹುದು. ಶೇಷಾದ್ರಿಗೆ ಜೋರಾಗಿ ಓದಿಕೊಂಡರೆ ಮಾತ್ರ ಪಾಠ ತಲೆಗೆ ಹತ್ತುತ್ತಿತ್ತು. ಅವರು ಎಷ್ಟು ಜೋರಾಗಿ ಓದುತ್ತಿದ್ದರು ಅಂದರೆ ಅದು ಮಾವನ ಮನೆಗೆ ಕೇಳುತ್ತಿತ್ತು. ಇದನ್ನು ಅವಕಾಶವಾಗಿ ಉಪಯೋಗಿಸಿಕೊಂಡಿದ್ದ ಮಾವನವರು, ಶೇಷಾದ್ರಿ ಓದಿದ್ದನ್ನು ಕೇಳಿಸಿಕೊಂಡೇ ಪರೀಕ್ಷೆಗಳನ್ನು ಪಾಸ್ ಮಾಡಿದ್ದರು, ಅದೂ ಶೇಷಾದ್ರಿಗಿಂತ ಹೆಚ್ಚು ಅಂಕಗಳನ್ನು ಗಳಿಸಿ!

ಇನ್ನು ಕೇಂದ್ರೀಯ ವಿದ್ಯಾಲಯ, ತಿರುಪತಿಯಲ್ಲಿ ಉಪಾಧ್ಯಾಯರ ಹುದ್ದೆ ಸಿಕ್ಕಿತ್ತು, ಆ ಕೆಲಸ ಖಾಯಂ ಆಗಲು, ದಕ್ಷಿಣ ಹಿಂದಿ ಪ್ರಚಾರ ಸಭಾದವರು ನಡೆಸುವ ಹಿಂದಿ ಪರೀಕ್ಷೆಗಳನ್ನು ಕಡ್ಡಾಯವಾಗಿ ಕೆಲವು ವರ್ಷಗಳ ಒಳಗೆ ತೆಗೆದುಕೊಳ್ಳಬೇಕಿತ್ತು. ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತರಿಸಿ ಒಂದು ಕಡೆ ಒಟ್ಟಾಗಿಟ್ಟಿದ್ದರು. ಆ ಅವಧಿಯಲ್ಲೇ ಮಾವನವರು ಹೆಂಡತಿಯನ್ನು ಕಳೆದುಕೊಂಡಿದ್ದರು. ಆಗ ಇನ್ನೂ ೩೩ ವರ್ಷ ವಯಸ್ಸು. ೩ ಚಿಕ್ಕ ಮಕ್ಕಳು, ಮನೆ ಜವಾಬ್ದಾರಿಗಳ ಜೊತೆಯಲ್ಲಿ, ಪರೀಕ್ಷೆ ನಾಳೆ ಎಂದಾಗ ಹಿಂದಿನ ದಿನ ರಾತ್ರಿ ಎಲ್ಲಾ ಪುಸ್ತಕಗಳನ್ನು suitcaseಗೆ ಹಾಕಿಕೊಂಡು, ಪರೀಕ್ಷೆ ಬರೆಯಲು ಹೊರಟರು. ರೈಲು ಪ್ರಯಾಣದಲ್ಲಿ ಓದಿದ್ದಷ್ಟೇ, ಒಳ್ಳೆಯ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದರು.
ಡಿಮೆನ್ಷಿಯ ಇರುವುದು ತಿಳಿದ ಒಂದು ವರ್ಷದ ನಂತರ ಬ್ಯಾಂಕಿನಿಂದ ಹಣ ತೆಗೆಯಬೇಕೆಂದು ಹೋಗಿದ್ದರು. ಪಾಸ್‌ಬುಕ್ ಆಗಲೀ, ಚೆಕ್‌ಬುಕ್ ಆಗಲೀ ತೆಗೆದುಕೊಂಡು ಹೋಗುವುದನ್ನು ಮರೆತಿದ್ದರು. ಬ್ಯಾಂಕ್ ಅಧಿಕಾರಿಗಳಿಂದ withdrawal slip ತೆಗೆದುಕೊಂಡು, ನೆನಪಿದ್ದ ೧೦ ಸಂಖ್ಯೆಗಳ ಅಕೌಂಟ್ ನಂಬರ್‌ ಬರೆದು, ಕೊನೆಗೂ ಹಣ ತೆಗೆದುಕೊಂಡು ಬಂದಿದ್ದರು. ಅಂದರೆ ಪ್ರಯತ್ನ ಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಇಲ್ಲಿಯೂ ಮೆದುಳನ್ನು ಉಪಯೋಗಿಸಿ ಎಷ್ಟು ಕೆಲಸ ಮಾಡುತ್ತೇವೆಯೋ, ಮುಂದೆ ನಮ್ಮ ಉಪಯೋಗಕ್ಕೆ ಅದು ಬರುತ್ತದೆ.

ಶ್ರೀ ರಾಮ
ಮಾವನವರು ಶ್ರೀ ರಾಮ ಬರೆಯಲು ಶುರು ಮಾಡಿದ್ದು ಚಿಕ್ಕ ವಯಸ್ಸಿನಿಂದಲೇ. ಮೂಟೆಗಟ್ಟಲೆ ನೋಟ್ ಪುಸ್ತಕದಲ್ಲಿ ಶ್ರೀ ರಾಮ ಬರೆದು, ರಾಮೇಶ್ವರಂಗೆ ಹೋಗಿ ಸಮುದ್ರದಲ್ಲಿ ಹಾಕಿದೆ ಎನ್ನುತ್ತಾರೆ. ಪ್ರತಿ ಬಾರಿ ಶ್ರೀ ರಾಮ ಬರೆಯುವ ಮೊದಲು ಆ ದಿನದ ತಾರೀಖು ಬರೆಯುತ್ತಿದ್ದರು. ಕೆಲವು ದಿನ ಈ ದಿನದ date ಏನಮ್ಮಾ ಎನ್ನುತ್ತಾರೆ. ಇಲ್ಲವಾದರೆ ಹಿಂದಿನ ದಿನದ ಪುಟ ನೋಡಿ, ಈ ದಿನದ date ಸರಿಯಾಗಿ ಅವರೇ ಬರೆಯುತ್ತಿದ್ದರು. ಅಂದು ೨೯/೧೦/೨೦೨೦ ರಂದು ತಾರೀಖು ಬರೆಯಲು ಚಡಪಡಿಸುತ್ತಿದ್ದರು. ಪರಿಶೀಲಿಸಿದಾಗ ತಿಳಿಯಿತು, ಹಿಂದಿನ ದಿನ ಸತತವಾಗಿ ೮ ಪುಟಗಳನ್ನು ಬರೆದಿದ್ದರು! ಹೇಳಿದರೆ ‘ಹೌದಾ’ ಅಂದಿದ್ದರು. ಆದರೆ ಅಂದು ಅವರನ್ನು ಅಷ್ಟು ಹೊತ್ತು ಕ್ರಿಯಾತ್ಮಕವಾಗಿರುವಂತೆ ಮಾಡಿದ್ದು ಅವರು ರೂಢಿಸಿಕೊಂಡಿದ್ದ ಅಭ್ಯಾಸ- ಅದು ಬರವಣಿಗೆ.

ಕಿರು ಪರಿಚಯ
ಮಕ್ಕಳಿಗೆ ಅವರು ತಂದೆ, ತಾಯಿ ಗುರು, ಹಿತೈಶಿ (ನನ್ನವರಿಗೆ ೭ ವರ್ಷವಿದ್ದಾಗ ತಾಯಿ ತೀರಿಕೊಂಡಿದ್ದರು). ಮೊಮ್ಮಕ್ಕಳಿಗೆ ಕತೆ ಹೇಳುವ ಹಾಗೂ ತರತರದ ತಿಂಡಿಗಳನ್ನು ಮಾಡಿಕೊಡುವ, ಆರೋಗ್ಯದ ದೃಷ್ಟಿಯಿಂದ ಹಣ್ಣು, ತರಕಾರಿಗಳ ಬಗ್ಗೆ ಹೇಳುವ ನೆಚ್ಚಿನ ತಾತ, ಕೇಂದ್ರೀಯ ವಿದ್ಯಾಲಯದಲ್ಲಿ ಮಕ್ಕಳಿಗೆ ಇಂಗ್ಲೀಷ್ ಮತ್ತು ಇತಿಹಾಸ ಕಲಿಸಿದ ಮೆಚ್ಚಿನ ಮೇಷ್ಟ್ರು, ೧೯೯೨ರಲ್ಲಿ NCERTಯಿಂದ 'ಪ್ಲೇ ವೇ ಮೆತೆಡ್ ಆಫ್ ಟೀಚಿಂಗ್' ವಿಷಯಕ್ಕೆ ಸಂಬಂಧಿಸಿದ ಅವರ ಕೆಲಸಕ್ಕೆ ಪ್ರಶಸ್ತಿ ಸಿಕ್ಕಿತ್ತು. ಜೀವನದಲ್ಲಿ ಕಷ್ಟಪಡಬೇಕು, ಕಷ್ಟಪಟ್ಟರೆ ಫಲ, ನಾನು ನೋಡಿ ಆ ಕಾಲಕ್ಕೇ ಟ್ರಿಪಲ್ ಎಂ.ಎ (English, History, Telugu) ಮಾಡಿರುವೆ, ಅದೂ ಕಾಲೇಜು ಮೆಟ್ಟಿಲು ಹತ್ತದೇ. ನಾನೇ ಸ್ವಂತ ಓದಿಕೊಂಡದ್ದು ಎಂದು ಮಕ್ಕಳಿಗೆ ಇರುವ ಅವಕಾಶಗಳನ್ನು ಶ್ರದ್ಧೆಯಿಂದ ಉಪಯೋಗಿಸಿಕೊಳ್ಳುವಂತೆ ಒತ್ತಿ ಹೇಳುತ್ತಿದ್ದರು. ಅವರಿಗೆ ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲೂ ಪ್ರಾವೀಣ್ಯತೆ ಇತ್ತು. ದಿನಚರಿ ಬರೆಯುವ ಹವ್ಯಾಸ ಇತ್ತು. ಅದನ್ನು ಕೊನೆಯ ದಿನದವರೆಗೂ ಪಾಲಿಸಿಕೊಂಡು ಬರಲು ಮಾತ್ರ ನಮ್ಮ ಸಹಾಯದ ಅವಶ್ಯಕತೆ ಬೇಕಿತ್ತು, ಹಳೆಯ ಡೈರಿಗಳಿಂದ ಅವರ ಬಗ್ಗೆ ಇನ್ನೂ ಹೆಚ್ಚಿನ ಪರಿಚಯ ಆಯ್ತು, ಅದನ್ನೆಲ್ಲಾ ಇಲ್ಲಿ ಹಂಚಿಕೊಂಡಿದ್ದೇನೆ.

ಸ್ನಾನ ಮಾಡುವಾಗಲೂ ಕೊನೆಯ ಮಗ್ಗು ನೀರು ಹಾಕಿಸಿಕೊಳ್ಳುವಾಗ, ಆ ನೀರಿನ ಮೇಲೆ ‘ಶ್ರೀ ರಾಮ’ ಬರೆಯುತ್ತಿದ್ದರು. ಕೊನೆ ಕೊನೆಗೆ ಹೆಚ್ಚು ಅಂದರೆ ಒಂದು ಅಥವಾ ಅರ್ಧ ಪುಟ ಮಾತ್ರ ಬರೆಯುತ್ತಿದ್ದದ್ದು. ಅವರಿಗೆ ಮುಖ್ಯವಾಗಿ ಬರೆಯಬೇಕಾದದ್ದು ಶ್ರೀ ರಾಮ’ ಮಾತ್ರ ಬೆಳಗ್ಗೆ ಎದ್ದ ಕೂಡಲೇ ತಾರೀಖು ಬರೆದು ೨ ಅಥವಾ ೩ ಸಾಲು ಬರೆದು ಪುಸ್ತಕ ಮುಚ್ಚಿ, ೬ ಗಂಟೆಯ ಕಾಫಿಗೆ ತಯಾರಾಗಿಬಿಡುತ್ತಿದ್ದರು. ಮಧ್ಯಾಹ್ನ, ಮಲಗಿ ಎದ್ದು ಬಂದು ಬರೆದಾಗ, ತಾರೀಖು ಒಂದು ದಿನ ಮುಂದೆ ಹೋಗುತ್ತಿತ್ತು. ರಾತ್ರಿ ಬರೆಯುವ ಹೊತ್ತಿಗೆ ತಾರೀಖು ಎರಡು ಮೂರು ದಿನಗಳು ಮುಂದೆ ಹೋಗಿರುತ್ತಿತ್ತು. ಹಗಲು ಹೊತ್ತು ಹೆಚ್ಚು ನಿದ್ದೆ ಮಾಡುವುದು ಸಹ ಡಿಮೆನ್ಷಿಯದ ಒಂದು ಲಕ್ಷಣ ಎಂದು ಸಮೀಕ್ಷೆಯಿಂದ ತಿಳಿದಿದೆ.
ಅವರು ಹಗಲು ಹೆಚ್ಚು ಮಲಗದಂತೆ ಎಚ್ಚರವಾಗಿರಿಸುವುದು ಮುಖ್ಯವಾಗಿತ್ತು. ಅದಕ್ಕೇ ತಾರೀಖು ಬರೆಯುವಂತೆ ಹೇಳುತ್ತಿದ್ದೆವು ಮತ್ತು ಆ ದಿನದ ವಿಶೇಷತೆಯನ್ನು ಅವರ ಜೊತೆ ಕುಳಿತು ಮಾತನಾಡುವುದು, ಹುಟ್ಟುಹಬ್ಬಗಳಿದ್ದರೆ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರ ಜೊತೆ ದೂರವಾಣಿಯ ಮೂಲಕ ಮಾತನಾಡಿಸುತ್ತಿದ್ದೆವು. ಅವರು ಹೆಚ್ಚು ಹೊತ್ತು ಮಾತನಾಡಲು ಇಷ್ಟ ಪಡದಿದ್ದರೂ ಶ್ರೀ ರಾಮ ಬರೆಯುವ ಆಸಕ್ತಿಯ ನಡುವೆ ಅವರನ್ನು ಕಾರ್ಯೋನ್ಮುಖರನ್ನಾಗಿ ಇರಿಸುವುದು ನಮ್ಮದೊಂದು ಕೆಲಸವಾಗಿತ್ತು.

ಅವರು ದೈವಾಧೀನರಾದದ್ದು ನವೆಂಬರ್ ೧೧, ೨೦೨೦ರ ಮುಂಜಾನೆ. ಹಿಂದಿನ ದಿನ ಸಹ ‘ಶ್ರೀ ರಾಮ’ ಬರೆದಿದ್ದಾರೆ. ಇನ್ನೇನು ಬೇಕು! ೮೪ರ ಆ ವಯಸ್ಸಿನಲ್ಲಿಯೂ ಅವರಿಗಿದ್ದ ಶ್ರದ್ಧೆ, ನಿಷ್ಠೆ, ನಮಗೊಂದು ಮಾದರಿ. ಅಲ್ಲವೇ?

ಒಂಟಿತನದಿಂದ ಮುಕ್ತಿ:
ತಟ್ಟೆಯಲ್ಲಿ ಅನ್ನ, ಸಾಂಬಾರ್ ಬಡಿಸಿ ಪಲ್ಯ ತರುತ್ತೇನೆಂದು ಒಳ ಹೋಗಿ ಬರುವಷ್ಟರಲ್ಲಿ ನನ್ನ ತಟ್ಟೆ ಖಾಲಿ ಆಗಿರುತ್ತಿತ್ತು. ಚಿಕ್ಕವರಿದ್ದಾಗ ಎರಡೂ ಕೈಗಳಿಂದ ಊಟ ಮಾಡುತ್ತಿದ್ದೆ. ಬಹಳ ಬೇಗ ತಿನ್ನುತ್ತಿದ್ದೆ. ಬಡಿಸುವವರಿಗೆ ಸವಾಲಾಗಿರುತ್ತಿತ್ತು ಎಂದೆಲ್ಲ ಹೇಳಿದ್ದರು. ಈಗ ಬೇಗ ತಿನ್ನುವುದರ ಜೊತೆಗೆ ಮರೆವು ಇದ್ದುದರಿಂದ, ಬೇಗ ಬೇಗ ಬಡಿಸುವುದರ ಜೊತೆಗೆ ನನಗೆ ಜ್ಞಾಪಿಸುವ ಜವಾಬ್ದಾರಿ ಇರುತ್ತಿತ್ತು. ಆಗ ತಾನೇ ತಿಂದಿರುವುದು ಮರೆತು ಹೋಗಿ ಮತ್ತೆ ಮತ್ತೆ ತಿನ್ನುವುದು ಶುರುವಾಗಿತ್ತು. ಸಕ್ಕರೆ ಖಾಯಿಲೆ ಇರೋದ್ರಿಂದ ಹಸಿವು ಹೆಚ್ಚು ಇರಬಹುದು ಎಂದು ನಾವು ತಿಳಿದಿದ್ದೆವು. ಡಾಕ್ಟರ್ ಹೇಳುತ್ತಿದ್ದರು ಇವರಿಗೆ ಜೀರ್ಣಶಕ್ತಿ ಚೆನ್ನಾಗಿರುವುದು ಅವರ ಅದೃಷ್ಟ’ ಎಂದು. ಆದರೆ ಈ ರೀತಿ ತಿನ್ನುವುದು ಮತ್ತು ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳದ ಕಾರಣ ಆರೋಗ್ಯ ಸರಿ ಇರುತ್ತಿರಲಿಲ್ಲ ಮುಖ್ಯವಾಗಿ ಊರುಗಳಿಗೆ ಹೋಗಿ ಬಂದ ದಿನಗಳಲ್ಲಿ. ಇವರ ಬಗ್ಗೆ ಊರಿನಿಂದ ದೂರುಗಳು ಬರಲು ಶುರುವಾಯಿತು. ನಿಮ್ಮ ಅಪ್ಪನನ್ನು ಊರಿಗೆ ಕಳಿಸಬೇಡಪ್ಪಾ’ ಎಂದು ಮಗನಿಗೆ ಸೂಕ್ಷ್ಮವಾಗಿ ಹೇಳಿದ್ದರು ಚಿಕ್ಕಪ್ಪ.

ಊರಿಗೆ ಹೋಗುವುದನ್ನು ತಡೆಯು ವುದು ಹೇಗೆ? ಡಾಕ್ಟರ್ ಹೇಳಿದಂತೆ ತಿನ್ನುವ ಆಹಾರದಲ್ಲಿ ನಿಯಂತ್ರಣವಿರಬೇಕು. ಆದರೆ ಡಾಕ್ಟರ್ ಹೇಳಿದ್ದು ಅವರು ಮರೆಯುತಿದ್ದರು. ಹಸಿವು ಬೇರೆ. ಹಣ್ಣು, ಸಿಹಿ ತಿನಿಸುಗಳು, ಹಣ್ಣಿನ ಪಾನೀಯಗಳನ್ನು ಕೊಂಡು ತಿನ್ನುವುದಕ್ಕೆ ಮಿತಿಯೇ ಇರಲಿಲ್ಲ. ಮುಖ್ಯವಾಗಿ ನಾವು ಗಮನಿಸಿ, ನಿಯಂತ್ರಣಕ್ಕೆ ತರಬೇಕಾದದ್ದು ಸಿಕ್ಕಾಪಟ್ಟೆ ತಿನ್ನುವುದನ್ನು ಕೈಯಲ್ಲಿ ಹಣವಿರುವ ತನಕ ಇದು ಸಾಧ್ಯವಿಲ್ಲ. ಆಗ ದೊಡ್ಡವರ ಜೊತೆ ಕುಳಿತು ಮಾತನಾಡಿದೆವು. ನೋಡಪ್ಪಾ, ಮಗ, ಸೊಸೆ ಆಫೀಸಿಗೆ ಹೋಗಬೇಕು. ನೀನು ಸ್ವಲ್ಪ ಅವರ ಮಾತು ಕೇಳಬೇಕು? ಎಂದು ಮಾವನವರ ಅಣ್ಣ, ಅವರಿಗೆ ಹೇಳಿದ್ದರು. ಅದಾದ ಮೇಲೆ, ಬ್ಯಾಂಕ್ ನಲ್ಲಿಯೂ ವಿಷಯ ತಿಳಿಸಿ, ಅವರ ಹಣದ ಜವಾಬ್ದಾರಿಯನ್ನು ತೆಗೆದುಕೊಂಡೆವು. ಬ್ಯಾಂಕ್ ಇಲ್ಲದಿದ್ದರೇನಂತೆ, ಕೈಗಡಿಯಾರ, ಚಿನ್ನದ ಚೈನು ಅಡ ಇಟ್ಟು ಹಣ ಪಡೆಯುತ್ತಿದ್ದರು. ಹೇಗೋ ತಿಳಿದುಕೊಂಡು ಅವುಗಳನ್ನು ಬಿಡಿಸಿ ತಂದೆವು. ಅವರು ಹೊರಗೆ ಹೋಗದಂತೆ ಗೇಟ್ ಬೀಗ ಹಾಕಬೇಕಾಯಿತು.

ತಿಂಡಿ, ಊಟ, ಮಜ್ಜಿಗೆ, ಹಣ್ಣು, ಹಸಿ ತರಕಾರಿಗಳನ್ನು ಅವರಿಗೆ ಇಟ್ಟು ಕಚೇರಿಗೆ ಹೋಗುತ್ತಿದ್ದೆವು. ಅಡಿಗೆ ಮನೆಯಲ್ಲಿ ಕಡಲೇಕಾಯಿ ಬೀಜ, ಕೊಬ್ಬರಿ ಹೀಗೆ ಕೆಲವು ತಿನ್ನುವ ಸಾಮಾನುಗಳು ಡಬ್ಬಗಳಲ್ಲಿ ಕಡಿಮೆಯಾಗುತ್ತಿತ್ತು. ಗಮನಿಸಿದಾಗ ಮಾವನವರು ಎಲ್ಲವನ್ನೂ ಒಂದಾದ ನಂತರ ಒಂದರಂತೆ ತಿಂದು ಮುಗಿಸಿ, ಅಡಿಗೆ ಮನೆಯ ಡಬ್ಬಗಳನ್ನು ಹುಡುಕುತ್ತಿದ್ದರು ಎಂದು ತಿಳಿಯಿತು. ಎಲ್ಲವನ್ನೂ ಭದ್ರವಾಗಿ ಅವರಿಗೆ ಸಿಗದ ಹಾಗೆ ಇಡಬೇಕಾಯಿತು. ಆಗಾಗ್ಗೆ ಕಚೇರಿಯಿಂದ ಫೋನ್ ಮಾಡಿ ವಿಚಾರಿಸುತ್ತಿದ್ದೆವು. ಒಂದು ಸಾರಿ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಡಾಕ್ಟರ್‌ಗೆ ತೋರಿಸಿದಾಗ, ಉಪ್ಪು ಜಾಸ್ತಿ ಕೊಡಬೇಡಿ, ಬಿ.ಪಿ. ತುಂಬಾ ಜಾಸ್ತಿ ಆಗಿದೆ ಎಂದು ಹೇಳಿ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲು ಹೇಳಿದರು. ನಂತರ ತಿಳಿದದ್ದೇನೆಂದರೆ, ಎಲ್ಲ ತಿಂದು ಖಾಲಿ ಮಾಡಿದ ನಂತರ ಏನೂ ಸಿಗದಿದ್ದಾಗ ಹುಣಸೇಹಣ್ಣು, ಉಪ್ಪು ಕಲೆಸಿ ತಿನ್ನುವುದು ಶುರುಮಾಡಿದ್ದರು ಎಂದು. ಮೆದುಳಿಗೆ ಆಘಾತವಾದಾಗಲಂತೂ ಇನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿತ್ತು. ನಾನು ಕಚೇರಿಗೆ ಹೋಗಿ ತಿಂಗಳಾಗಿತ್ತು. ಮಾವನವರಲ್ಲಿ ಚೇತರಿಕೆ ಕಂಡಿತಾದರೂ, ಹೆಚ್ಚು ದಿನ ರಜೆ ಹಾಕುವಂತಿರಲಿಲ್ಲ.

ಇದಾದ ಮೇಲೆಯೇ ನಮ್ಮ ಮನೆಯಲ್ಲಿಯೇ ಬಹಳ ವರುಷಗಳಿಂದ ಕೆಲಸ ಮಾಡುತ್ತಿದ್ದ ಪಟ್ಟಮ್ಮನ ಸಹಾಯಕ್ಕೆ ಕೇಳಿಕೊಂಡೆವು. ಅವಳ ಕೆಲಸ, ಆಹಾರ ಮತ್ತು ಮಾತ್ರೆಗಳನ್ನು ಕೊಡುವ ಸಮಯದಲ್ಲಿ ಮಾತ್ರ ಬಂದು, ಅವರ ಮುಂದೆ ಇಟ್ಟು ಹೋಗುವುದು. ಆಗಲೂ ತಿನ್ನುವ ಪದಾರ್ಥಗಳನ್ನು ಅಡಿಗೆ ಮನೆಯಲ್ಲಿ ಇಟ್ಟು ಬೀಗ ಹಾಕಿ, ಅದರ ಕೀಯನ್ನು ಒಂದು ಕಡೆ ಇಡಬೇಕಿತ್ತು. ಪಟ್ಟಮ್ಮ ರಜೆ ತೆಗೆದುಕೊಂಡರೆ ಮನೆಯಲ್ಲಿ ಯಾರಾದರೂ ಇರಲೇಬೇಕಿತ್ತು. ಆದರೆ ಆಕೆ ಬಂದು ಹೋದ ನಂತರದ ಸಮಯ ಅವರು ಒಬ್ಬರೇ ಇರಬೇಕಾಗಿತ್ತು. ಅವರಿಗೆ ಅತಿ ಪ್ರಿಯವಾದ ಎರಡು ವಿಷಯಗಳು ಅಂದರೆ ಜನ ಮತ್ತು ಮಾತು, ಇವುಗಳಿಂದ ದೂರವಾಗುತ್ತಿದ್ದರು. ಮನೆಯಿಂದ ಆಚೆಗೆ ಹೋಗುವ ಹಾಗೆ ಇರಲಿಲ್ಲ. ಒಂಟಿತನ ಆವರಿಸುತ್ತಿತ್ತು. ಬೆಳಗ್ಗೆ ಹೊತ್ತು ನಿದ್ದೆ ಮಾಡುವುದೂ ಹೆಚ್ಚಾಗಿತ್ತು. ‘ನೀವು ಬೆಳಗ್ಗೆ ಹೆಚ್ಚು ನಿದ್ದೆ ಮಾಡ್ತೀರ’ ಅಂದ್ರೆ ‘ಇಲ್ಲಮ್ಮಾ, ನಾನು ಕೆಲಸಕ್ಕೆ ಹೋಗುತ್ತಿದ್ದವನು. ಹಾಗೆಲ್ಲಾ ಬೆಳಗ್ಗೆ ನಿದ್ದೆ ಬರೋದೇ ಇಲ್ಲ. ರಾತ್ರಿ ಚೆನ್ನಾಗಿ ೧೧ ರಿಂದ ೪ರ ವರೆಗೆ ಮಲಗುತ್ತೇನೆ’ ಎನ್ನುತ್ತಿದ್ದರು.

ಹೀಗೇ ಇದ್ದಿದ್ದರೆ ಮರೆವಿನ ಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿತ್ತು. ೨೦೧೮ರಲ್ಲಿ ಅವರ ಕಾಲಿನಲ್ಲಿ ಗಾಯ ಆಯಿತು. ಸಕ್ಕರೆ ಖಾಯಿಲೆ ಇದ್ದುದರಿಂದ ಬೇಗ ವಾಸಿ ಆಗಲಿಲ್ಲ. ಒಂದೆರಡು ತಿಂಗಳುಗಳು ಓಡಾಡುವ ಹಾಗೂ ಇರಲಿಲ್ಲ ಆಗ ಅವರನ್ನು ನೋಡಿಕೊಳ್ಳಲು ಒಬ್ಬ ದಾದಿಯನ್ನು ನೇಮಿಸಬೇಕಾಯಿತು. ಈಗ ಅವರಿಗೆ ಮಾತನಾಡಲು ಮನೆಯಲ್ಲಿ ಜನ ಸಿಕ್ಕಹಾಗಾಯಿತು. ಕಾಲಿನ ಗಾಯ ಸಹ ಡಾಕ್ಟರ್‌ಗೆ ಆಶ್ಚರ್ಯವಾಗುವ ಹಾಗೆ ವಾಸಿ ಆಯಿತು. ನಮಗೆ ತಿಳಿಯದೇ ನರ್ಸ್‌ ಇಟ್ಟಿದ್ದು ಒಳ್ಳೆಯದಾಗಿತ್ತು.

ತಮಾಷೆ ತಾತ:
ಮೊದಲೇ ಇತಿಹಾಸ ವಿಷಯದ ಮೇಷ್ಟ್ರಾಗಿದ್ದ ಅವರು ಜನರ ಪರಿಚಯ ಮಾಡಿಕೊಳ್ಳುತ್ತಿದ್ದದ್ದು ಅವರ ಊರಿನ ಹೆಸರು ಕೇಳಿಯೇ. ಸಂಬಂಧಿಕರೊಬ್ಬರು ಅನೇಕ ವರ್ಷಗಳು ಮಲೇಶಿಯಾದಲ್ಲಿ ಇದ್ದು ಬಂದಿದ್ದರು. ಅವರು ಸ್ವಲ್ಪ ಸಮಯ ಆ ದೇಶದ ಬಗ್ಗೆ ಮಾತನಾಡಿದ ಮೇಲೆ ಮಾವನವರು ಆ ಊರಿನ ವಿಚಾರ ಹೇಳುವುದಕ್ಕೆ ಶುರು ಮಾಡಿದರು.. ಕೊನೆಗೆ, ಬಂದ ಆ ನೆಂಟರು ಅಷ್ಟು ವರ್ಷ ಅಲ್ಲಿ ಇದ್ದದ್ದು ನಾನು, ನೀವೇ ಹೋಗಿ ಬಂದ ಹಾಗೆ ಎಲ್ಲವನ್ನೂ ವಿಸ್ತಾರವಾಗಿ ಹೇಳಿದಿರಿ, ಕೇಳುತ್ತಾ ಸಮಯ ಸರಿದದ್ದೇ ಗೊತ್ತಾಗಲಿಲ್ಲ ಎಂದು ಅವರ ವಿಷಯ ಜ್ಞಾನ ಮತ್ತು ನೆನಪಿನ ಶಕ್ತಿಯನ್ನು ಮನಸಾರೆ ಹೊಗಳಿದ್ದರು.

ಅವರ ಮೆದುಳಿಗೆ ಆಘಾತವಾದಾಗ ಚೇತರಿಸಿಕೊಳ್ಳಲು ಸುಮಾರು ೨ ರಿಂದ ೩ ತಿಂಗಳುಗಳು ಬೇಕಾಯಿತು. ಮಾತು ಬರುತ್ತಿತ್ತು ಆದರೆ ನಿರ್ದಿಷ್ಟ ಪದಗಳು, ಸರಿಯಾದ ವಾಕ್ಯ ರಚನೆ ಬರುತ್ತಿರಲಿಲ್ಲ. ಆದರೂ ಅವರು ಪ್ರತೀ ಪ್ರಶ್ನೆಗೂ ಬೇಸರಿಸದೆ ಉತ್ತರ ಕೊಡುತ್ತಿದ್ದರು. ಅಂದು ನನ್ನ ಹೆಸರು ಮರೆತಿದ್ದರು. ಇವರು ಯಾರು ಎಂದು ಕೇಳಿದರೆ ‘ಮನೆ ಯಜಮಾನಿ’ ಅಂತಲೂ, ಅವರ ಮಗಳು ‘ನಾನು ಯಾರು ಅಪ್ಪಾ’ ಅಂದರೆ ‘ಏನಮ್ಮಾ, ನೀನ್ಯಾರೆಂದು ನಿನಗೆ ಗೊತ್ತಿಲ್ವಾ’ ಅನ್ನುವುದೇ! ಇನ್ನೊಬ್ಬ ಮಗಳು ಅಂದು ಆಸ್ಪತ್ರೆಗೆ ಬರಲಿಲ್ಲ. ಅವಳಿರುವುದು ಗೋವಾದಲ್ಲಿ. ನಾವುಗಳು ಅವರ ನೆನಪಿನ ಶಕ್ತಿ ಪರೀಕ್ಷೆ ಮಾಡಲು ಗೋವಾದಲ್ಲಿ ಯಾರಿದ್ದಾರೆ ಎಂದರೆ ‘ವಾಸ್ಕೋಡಗಾಮ’ ಎಂದಿದ್ದರು. ‘ಗೋವಾದಲ್ಲಿರುವ ನಿಮ್ಮ ಮಗಳ ಹೆಸರೇನು’ ಎಂದರೆ ಅವಳ ಹೆಸರು ‘ಉಷಾ’ ಹೋಗಿ ‘ಚಾಮುಂಡೇಶ್ವರಿ’ ಆಗಿತ್ತು.

ಇವರ ವಿಷಯದಲ್ಲಿ, ಬಲವಂತದಿಂದ ಉತ್ತರ ಪಡೆಯಬೇಕಾದ ಪ್ರಯಾಸ ಎಂದೂ ಬಂದಿರಲಿಲ್ಲ. ಒಬ್ಬರ ಜೊತೆ ಮಾತನಾಡುವಾಗ, ಮಾತಿನಲ್ಲಿ ಭಾಗಿಯಾಗಿಬಿಡುತ್ತಿದ್ದರು, ಇದು ಅವರ ವ್ಯಕ್ತಿತ್ವ. ಹಾಗಾಗಿ ಒತ್ತಡ ಎನಿಸುತ್ತಿರಲಿಲ್ಲ. ಆ ಹೊಂದಾಣಿಕೆ ಇದ್ದುದರಿಂದಾಗಿಯೇ ಮಾತು ಮುಂದುವರಿಸಲು ಆಗುತ್ತಿತ್ತು. ಇಲ್ಲಿ ಸ್ಮರಿಸಬೇಕಾದದ್ದು ಅವರ ಸಹಕಾರ, ಅದು ನಮಗೆ ತಂದುಕೊಟ್ಟ ಸಮಾಧಾನ.

ಗಾದೆಗಳು ಮರೆಯುವುದಿಲ್ಲ:
‘ಪೊನ್ ಕಡಿಚ್ಚಾ ಕೂಡ ಬುಧನ್ ಕಡಿಕ್ಕಾದು’ ಎಂಬ ತಮಿಳು (ಅಂದರೆ ಬುಧವಾರ ಬಂಗಾರಕ್ಕಿಂತ ಬೆಲೆಬಾಳುವಂತಹದು). ಗಾದೆಯನ್ನು ಯಾವಾಗಲೂ ಹೇಳುತ್ತಿದ್ದರು. ಯಾವುದಾದರೂ ಸಾವಿನ ವಿಷಯ ಹೇಳಿದರೆ ಸಾಕು, `ಜಾತಸ್ಯ ಮರಣಂ ಧೃವಂ’ ಎಂದು ಹೇಳದೆ ಬಿಡುತ್ತಿರಲಿಲ್ಲ. ಅವರು ದೈವಾಧೀನರಾದದ್ದೂ ಬುಧವಾರದಂದೇ.

ನನಗೆ ಬೀದಿ ನಾಯಿ ಕಚ್ಚಿದ ವಿಷಯ ತಿಳಿದು ಬಹಳ ಬೇಸರ ಪಟ್ಟುಕೊಂಡಿದ್ದರು. ಕಚ್ಚಿದ ಗಾಯವನ್ನು ತೋರಿಸಿ ೫ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು ಅಂತಲೂ ಹೇಳಿದೆ. ಯಾವ ಗಾದೆಯೂ ಹೊರಗೆ ಬರಲಿಲ್ಲ. ಕೊನೆಗೆ ಒಂದು ಚುಚ್ಚುಮದ್ದು ೩೪೦ ರೂಪಾಯಿ ಅಂದ ತಕ್ಷಣ ‘ಕಾಂಚನಂ ಕರ್ಮ ವಿಮೋಚನಂ’ ಎಂದು ಹೇಳಿ ಕರ್ಮ ಬಿಟ್ಟಿತು ಬಿಡಮ್ಮಾ, ಎಲ್ಲಾ ಸರಿ ಹೋಗತ್ತೆ ಅಂದಿದ್ದರು. ೫ನೇ ಚುಚ್ಚುಮದ್ದು ಇದ್ದದ್ದು ಅವರು ತೀರಿಕೊಂಡ ದಿನದಂದೇ. ಗಾಯ ವಾಸಿಯಾಯಿತು. ಆದರೆ ಗಾಯದ ಗುರುತು ಅವರು ಹೇಳಿದ ಗಾದೆಯನ್ನು ಇಂದೂ ನೆನಪಿಸುತ್ತದೆ.

ಅವರನ್ನು ಮಾತಿನಲ್ಲಿ ತೊಡಗಿಸಬೇಕೆಂದರೆ ಅರ್ಧ ಗಾದೆ ಹೇಳಿದರಾಯಿತು, ಉಳಿದದ್ದು ಅವರು ಹೇಳಿ ಮುಗಿಸುತ್ತಿದ್ದರು. ‘ಐಯ್ಯವಾರಿನಿ ಚೇಯಬೋಯಿ’ ಎಂದರೆ ಸಾಕು ‘ಕೋತಿಪಿಲ್ಲಾಯೆ’ ಎಂದು ಪೂರ್ತಿ ಮಾಡುತ್ತಿದ್ದರು. ಒಬ್ಬ ಬ್ರಾಹ್ಮಣನನ್ನ ಮಾಡಲು ಹೋಗು ಒಂದು ಕೋತಿ ಮರಿ ಮಾಡಿದ ಹಾಗೆ ಎಂಬುದು ಈ ತೆಲುಗು ಗಾದೆಯ ಅರ್ಥ. ಅನೇಕ ಭಾಷೆಗಳ ಮೇಲೆ ಅವರಿಗಿದ್ದ ಹಿಡಿತ, ಅವರ ಮರೆವನ್ನು ಮರೆಮಾಚುತ್ತಿತ್ತು.

ನನ್ನ ಕಛೇರಿಗೆ ಶನಿವಾರ ಹಾಗೂ ಭಾನುವಾರ ರಜಾ. ಅವರ ಜೊತೆ ಮಾತನಾಡುತ್ತಾ, ‘ಅದು ಹೇಗೆ ಸಮಯ ಹೋಗುತ್ತಿತ್ತೋ ಗೊತ್ತಿಲ್ಲ. ಸೋಮವಾರ ಬಂದೇ ಬಿಡುತ್ತೆ, ಮತ್ತೆ ಕಛೇರಿಗೆ ಹೋಗಬೇಕು’ ಅಂದರೆ ಸಾಕು. ಇಂಗ್ಲೀಷ್ ಗಾದೆ ರೆಡಿ ‘ಟೈಮ್ ಅಂಡ್ ಟೈಡ್ ವೈಟ್ ಫರ್ ನನ್’ ನಾನು ಮಾತು ಮುಂದುವರೆಸುತ್ತಾ ಅದೇನೋ ಸರಿ ನಿಮಗೆ ಕಾಫಿ ಕೊಡೋದು ಸಂಜೆ ೪ ಗಂಟೆಗೆ, ೩ ಗಂಟೆಯಿಂದಲೇ ‘೪ ಗಂಟೆ ಕಾಫಿ, ೪ ಗಂಟೆ ಕಾಫಿ’ ಅಂತ ೮-೧೦ ಸಲ ಹೇಳ್ತೀರಾ, ಏಕೆ ಎಂದು ಕೇಳಿದರೆ ಸ್ವಲ್ಪ advance ಆಗಿ ಕೇಳ್ತೀನಿ ಅಷ್ಟೇ ಎನ್ನುತ್ತಿದ್ದರು. ಅದು ನಮಗೆ ೮-೧೦ ಸಲ, ಆದರೆ ಅವರಿಗೆ ಒಂದೇ ಸಲ ಹೇಳಿದ ನೆನಪು.

ಗುಂತಪಂಗಲ, ಕಡಲೇಕಾಯಿ ಪ್ರಸಂಗ:
ವರಮ್ಮ ಎನ್ನುವಾಕೆ ಶಾಲೆಯ ಪಕ್ಕದ ಒಂದು ಸಣ್ಣ ಅಂಗಡಿಯಲ್ಲಿ ಪಡ್ಡು (ಗುಂತಪಂಗಲ) ಮಾಡಿ ಮಾರುತ್ತಿದ್ದಳು. ಮಾವನವರಿಗೆ ಈ ತಿಂಡಿ ಮಾಡಿದಾಗಲೆಲ್ಲಾ ಆ ವರಮ್ಮಾನ ಜ್ಞಾಪಿಸಿಕೊಳ್ಳದೆ ತಿಂಡಿ ತಿನ್ನುತ್ತಿರಲಿಲ್ಲ. ತಿಂಡಿ ತಿಂದ ಕೆಲವು ನಿಮಿಷಗಳಾದ ಮೇಲೆ ಆ ದಿನದ ತಿಂಡಿ ಏನು ಎಂದರೆ ‘ವರಮ್ಮಾ ಗುಂತಪಂಗನಾಲು’ ಎನ್ನುತ್ತಿದ್ದರು. ಪೊಂಗಲ್ ಮಾಡಿದರಂತೂ, ಇತಿಹಾಸದ ಮೇಷ್ಟ್ರು, ನಾರ್ವೆ ದೇಶವನ್ನು ನೆನಪಿಸಿಕೊಂಡು, ಆ ದೇಶದವರು ಈ ತಿಂಡಿಯನ್ನು ತಕ್ಷಣ ಶಕ್ತಿ (Instant Energy) ಕೊಡುವ ಆಹಾರ ಎನ್ನುತ್ತಾರೆಂದು ಹೇಳಿಯೇ ತಿನ್ನಲು ಶುರು ಮಾಡುತ್ತಿದ್ದರು.

ಆಹಾರ ಮತ್ತು ಆರೋಗ್ಯದ ವಿಷಯದಲ್ಲೂ ಇದೇ ರೀತಿ, ಮಕ್ಕಳಿಗೆ ತಿಳಿಹೇಳುತ್ತಿದ್ದರು. ಇಬ್ಬರು ಅಜ್ಜಿಯರ ಸಂಭಾಷಣೆ, ‘ನಾಣಿ, ಒಂದೇ ಒಂದು ಕಡಲೇಕಾಯಿ ತಿಂದು ನೀರು ಕುಡಿದೆ ಅಷ್ಟೇ ಕಣೇ, ಕೊಡಕೊಡವಾಗಿ ಜಾಡಿಸಿಬಿಡ್ತು’ . ಈಗಲೂ ಕಡಲೇಕಾಯಿ ತಿಂದು ನೀರು ಕುಡಿಯಬೇಕು ಅನ್ನಿಸಿದಲ್ಲಿ ಅಜ್ಜಿಯ ಮಾತು ನಮ್ಮನ್ನು ಎಚ್ಚರಿಸುತ್ತದೆ, ನಗು ತರಿಸುತ್ತದೆ. ಈ ರೀತಿಯ ಘಟನೆಗಳನ್ನು ಮಾತಿನಲ್ಲಿ ಹೊಸೆದು ಹೇಳುವ ಕಲೆ ಎಂಥವರನ್ನೂ ಅವರ ಜೊತೆ ಸಂಭಾಷಣೆಯಲ್ಲಿ ತೊಡಗುವಂತೆ ಮಾಡುತ್ತಿತ್ತು.

ಇದರಲ್ಲಿ ಜೀವನಕ್ಕೆ ಸಂಬಂಧಿಸಿದ ಮೌಲ್ಯಗಳಿರುತ್ತಿತ್ತು. ಸಾಮಾನ್ಯಜ್ಞಾನ, ನೀತಿ, ಹಾಸ್ಯಗಳು ಸೇರಿ ಸ್ವಾರಸ್ಯಕರವಾಗಿರುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಬಹಳ ದಿನ ನೆನಪಿನಲ್ಲಿ ಉಳಿಯುತ್ತಿತ್ತು. ಇದು ಒಬ್ಬ ಒಳ್ಳೆಯ ಗುರುವಿಗೆ ಇರಬೇಕಾದ ಲಕ್ಷಣ. ಇವರಿಗೆ ಸಹಜವಾಗಿಯೇ ಬಂದಿತ್ತು. ಆದ್ದರಿಂದಲೇ ಇವರು ಶಿಷ್ಯರ ಅಚ್ಚುಮೆಚ್ಚಿನ ಗುರುವಾಗಿದ್ದರು. ಅವರ ಈ ತರದ ಅಂದಿನ ಸಂಭಾಷಣೆಗಳು ಅವರ ಮರೆವಿನ ತೊಂದರೆಯನ್ನು ಕಡಿಮೆ ಮಾಡುವಲ್ಲಿ ಖಂಡಿತಾ ಸಹಾಯಕ್ಕೆ ಬಂದಿತ್ತು

ತಿನ್ನುವುದೇ ಹವ್ಯಾಸವಾಗಿ, ಹವ್ಯಾಸವೇ ಮದ್ದಾದರೆ:
ಬೆಳಗಿನ ತಿಂಡಿ ತಿಂದು ಕೆಲವು ನಿಮಿಷಗಳಾದ ಮೇಲೆ ಇಂದು ಏನು ತಿಂಡಿ ತಿಂದಿರಿ ಕೇಳಿದರೆ, ಪ್ರಶ್ನೆಗೊಂದು ಉತ್ತರದಂತೆ, ಚಿತ್ರಾನ್ನ, ಇಡ್ಲಿ, ದೋಸೆ, ಚಪಾತಿ ಇವುಗಳಲ್ಲಿ ಯಾವುದಾದರೊಂದು ಹೇಳಿಬಿಡುವುದು. ಈಗ ತಿಂಡಿ ತಿನ್ನುವ ಮೊದಲು, ಅಂದಿನ ತಿಂಡಿಯನ್ನು ನೋಡಿದ ಮೇಲೆ ಅದರ ಹೆಸರು ಹೇಳಿಸಿ ಅದರ ಬಗ್ಗೆ ಸ್ವಲ್ಪ ಮಾತನಾಡಿಸಿ, ಊಟ ಆದಲ್ಲಿ ಅದರಲ್ಲಿಯ ತರಕಾರಿಗಳ ಹೆಸರನ್ನು ಹೇಳುತ್ತಿದ್ದೆವು. ‘ಮೊಸರನ್ನ ಆಯಿತು’ ಎನ್ನುವ ಒಂದು ಫಲಕ ತಯಾರು ಮಾಡಿದ್ದೆವು. ಇನ್ನೇನು ಊಟ ಆಯಿತು ಅನ್ನುವ ಹೊತ್ತಿಗೆ ಅದನ್ನು ತೋರಿಸುತ್ತಿದ್ದೆವು. ಅಂದರೆ ಹೇಳುವುದಕ್ಕಿಂತ, ತೋರಿಸಿ ನೆನಪು ಮಾಡಿಸುವುದು (Audio, Visual Memory) ನಮ್ಮ ಸಹಾಯಕ್ಕೆ ಬಂದಿತ್ತು. ಯಾವುದು ಆದ ಮೇಲೆ ಯಾವುದು ಮಾಡಬೇಕೆಂದು ನಾವು ಮರೆಯದಿದ್ದರೆ ಸಾಕಾಗಿತ್ತು.

ಹಲವು ಸಲ ರಾತ್ರಿ ಊಟ ಕೊಟ್ಟಿಲ್ಲ ಅಂತ ಎದ್ದು ಕೂತುಬಿಡುತ್ತಿದ್ದರು. ಅದಕ್ಕಾಗಿ ಊಟ ಆದ ತಕ್ಷಣ ಅವರ ಕೈಯಲ್ಲೇ ‘ಇಂದು ಊಟ ಆಯಿತು’ ಎಂದು ಬರೆದು ಅಂದಿನ ತಾರೀಖು ಬರೆಸುತ್ತಿದ್ದೆವು. ಅದಕ್ಕೊಂದು ಡೈರಿ ಇಟ್ಟಾಯಿತು. ಒಂದು ದಿನ ನೋಡಿಕೊಳ್ಳುತ್ತಿದ್ದ ಹುಡುಗಿ ಬರೆಸಿಕೊಳ್ಳುವುದು ಮರೆತಿದ್ದಳು. ಅವಳೇ ನಮ್ಮ ಅನುಮತಿ ತೆಗೆದುಕೊಂಡು ಡೈರಿಯಲ್ಲಿ ಬರೆದು ಬಿಟ್ಟಳು. ಆದರೆ ಮಾವನವರಿಗೆ ಅದು ತಾನು ಬರೆದಿದ್ದಲ್ಲಾ ಎಂದು ತಿಳಿದು ಹೋಯಿತು. ಅವರು ಅದನ್ನು ಒಪ್ಪಲೇ ಇಲ್ಲ. ಅಂದು ಅವರಿಗೆ ನೆನಪು ಮಾಡಿಸಲು ಹೊರಟು, ಅದರಲ್ಲಿ ನಾವು ಸೋತದ್ದು, ಕೊನೆಗೆ ತಿನ್ನಲು ಬಾಳೇಹಣ್ಣು ಕೊಟ್ಟದ್ದು ಎಂದೂ ಮರೆಯುವಂತಿಲ್ಲ. ಅಂದಿನಿಂದ ನೆನಪಿನ ಶಕ್ತಿ ಹೆಚ್ಚು ಮಾಡಿಕೊಳ್ಳುವ ಸರದಿ ನಮ್ಮದಾಗಿತ್ತು.

ಅವರು ಒಂದು ‘ಜ್ಞಾನಭಂಡಾರ, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಿತ್ತು. ಅವರನ್ನು ಬೆಳಗಿನಿಂದ ಸಾಯಂಕಾಲದವರೆಗೆ ಚೂಟಿಯಾಗಿಡಲು ಅವರ ತಿನ್ನುವ ಹವ್ಯಾಸವನ್ನೇ ಉಪಯೋಗಿಸಿಕೊಳ್ಳಬೇಕಾಯಿತು. ಅಮೆರಿಕಾದಲ್ಲಿರುವ ಮೊಮ್ಮಗಳು ತಾತನ ೮೩ನೇ ಹುಟ್ಟುಹಬ್ಬಕ್ಕೆ Map Puzzle ಕಳಿಸಿದ್ದಳು. ಬಿಡಿ ಬಿಡಿಯಾಗಿರುವ ೬೫ ದೇಶಗಳನ್ನು ಜೋಡಿಸಿ ಪ್ರಪಂಚದ ನಕ್ಷೆ ಬರಿಸುವ ಆಟ. ಅದೂ ಭೂಗೋಳದ ವಿಷಯ ಬೇರೆ. ಕೇಳಬೇಕೇ! ಅವರೇ ಎಲ್ಲವನ್ನೂ ಜೋಡಿಸಿದ್ದರು, ಮನೆಯವರೆಲ್ಲಾ ಅವರೊಟ್ಟಿಗೆ ಕುಳಿತು ಪ್ರೋತ್ಸಾಹಿಸುತ್ತಿದ್ದೆವು. ತಾತನೇ ಅಂದಿನ ಪಂದ್ಯಪುರುಷ. ಅವರೇ ಮಕ್ಕಳಿಗೆ ಪ್ರೋತ್ಸಾಹ ಮಾಡಿದ ಹಾಗೆ ಪ್ರತಿ ದಿನ, ದಿನಪತ್ರಿಕೆಯ ಮುಖ್ಯಾಂಶಗಳನ್ನು ಓದಿದಾಗ, ದಿನಚರಿ ಬರೆದಾಗ ಏನಾದರೂ ತಿನ್ನಲು ಕೊಡುತ್ತಿದ್ದೆವು. ತಿಂದ ತೃಪ್ತಿ ಅವರಿಗೆ, ಅವರ ಆತಂಕ ಕಡಿಮೆ ಮಾಡಿದ ನೆಮ್ಮದಿ ನಮಗೆ.

ಡಿಮೆನ್ನಿಯ-ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆಗಳು
ನಮ್ಮ ದೇಹವನ್ನು ದೇಗುಲದಂತೆ ನೋಡಿಕೊಳ್ಳಬೇಕು, ಅದರಲ್ಲೂ ಮೆದುಳನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ನಮಗೇ ತಿಳಿದಿರುವ ಹಾಗೆ ಹೃದಯ, ಶ್ವಾಸಕೋಶ, ಪಿತ್ತ ಜನಕಾಂಗಗಳ ಕಸಿ ಮಾಡುವುದನ್ನು ಕೇಳಿದ್ದೇವೆ. ಆದರೆ ಮೆದುಳು ಈ ವಿಷಯದಲ್ಲಿ ಸವಾಲಾಗೇ ಇದೆ. ಅದು ಇರುವುದು ೩ ಪೌಂಡ್, ಒಂದು ಮೀಡಿಯಂ ಕಾಲೀಪ್ಲವ‌ರ್ ಗಾತ್ರದಷ್ಟು. ಅದರಲ್ಲಿ ಸುಮಾರು ೧೦೦ ಬಿಲಿಯನ್ ನ್ಯೂರಾನುಗಳು, ೧೦೦ ಟ್ರಿಲಿಯನ್ ಸಿನಾಪ್ಟಿಕ್ ಕನೆಕ್ಷನ್ಸ್‌ಗಳು ಇರುವುದು ವಾಸ್ತವದ ಸಂಗತಿ.

೧೮೯೪ರಲ್ಲಿ Aloysius Alzheimer ಕಂಡುಹಿಡಿದದ್ದು Alzheimer Dementia ಇದನ್ನು Cortical Dementia ಅಂತ ಹೇಳುತ್ತಾರೆ. ಡಿಮೆನ್ನಿಯ ಎಂದರೆ ಅರಳು, ಮರಳು ಅಥವಾ ಮರೆವಿನ ಖಾಯಿಲೆ. ಇದರಲ್ಲಿ ಮೆದುಳಿನ ನಿಷ್ಕ್ರಿಯತೆ ಹೆಚ್ಚುತ್ತದೆ, ನೆನಪಿನ, ಬುದ್ಧಿಶಕ್ತಿ ಕ್ಷೀಣಿಸುವುದು, ಮಾನಸಿಕ ಸಾಮರ್ಥ್ಯ ಕುಂದುವುದಕ್ಕೆ ಶುರುವಾಗುತ್ತದೆ,

Vascular Dementia ಇನ್ನೊಂದು ರೀತಿಯದು. BP ಜಾಸ್ತಿ ಇದ್ರೆ, ಮೆದುಳಿಗೆ ಹಠಾತ್ ಆಘಾತ (Multiple-Infarct) ಆಗುವ ಸಂಭವ ವಿರುತ್ತದೆ. ಮೆದುಳಿನ ಗಾತ್ರನೂ ಕಡಿಮೆ ಆಗುತ್ತದೆ. ಇದನ್ನು Sub-Cortical Dementia ಅಂತಾನೂ ಹೇಳುತ್ತಾರೆ. ಇದರಲ್ಲಿ ಮಾನಸಿಕ ತೊಂದರೆಗಳು ಜಾಸ್ತಿ ಇರುತ್ತದೆ. ಇದ್ದಕಿದ್ದಂತೆ ಅಳೋದು, ನಗೋದು, ಅನುಚಿತ ವರ್ತನೆ (disinhibited behavior) ಕಂಡುಬರುತ್ತದೆ. ಈ ಲಕ್ಷಣಗಳು ಅಲ್ಲಿ ಇಲ್ಲಿ ವ್ಯತ್ಯಾಸ ಇರುತ್ತವೇ ಹೊರತು, ಎರಡೂ ರೀತಿಯ Dementia ದಲ್ಲೂ ನೆನಪಿನ ಶಕ್ತಿ ಕ್ಷೀಣಿಸುವುದು, ಹೆಚ್ಚುತ್ತಾ ಹೋಗುತ್ತದೆ (Acquired Progressive memory loss).

ನಮ್ಮ ಭಾರತ ದೇಶದ ಒಂದು ಸಮುದಾಯದಲ್ಲಿ, ೬೫ ವರ್ಷ ದಾಟಿದವರಲ್ಲಿ ೧೦% ಹಾಗೂ ೮೦ ವರ್ಷ ದಾಟಿದವರಲ್ಲಿ ೨೦% ಜನಕ್ಕೆ ಈ ಸಮಸ್ಯೆ ಇರುತ್ತದೆ. ನಮ್ಮ ದೇಶದ ಜನಸಂಖ್ಯೆಗೆ ಇದು ಒಂದು ದೊಡ್ಡ ಸಂಖ್ಯೆ, ಸೆಪ್ಟೆಂಬರ್ ೨೧, ಅಂತಾರಾಷ್ಟ್ರೀಯ ಡಿಮೆನ್ಷಿಯ ದಿನ. ಇದರ ಉದ್ದೇಶ, ಡಿಮೆನ್ಷಿಯ ಬಗ್ಗೆ ಅರಿವು ಮೂಡಿಸುವುದು. ಮರೆವಿನ ತೀವ್ರತೆ ಹೆಚ್ಚು ಆದ ಮೇಲೆ ಚಿಕಿತ್ಸೆ ಕಷ್ಟವಾಗುತ್ತದೆ. ಈ ಹಂತದಲ್ಲಿ ಡಿಮೆನ್ಷಿಯ ಖಾಯಿಲೆಗೆ ಚಿಕಿತ್ಸೆ ಅಷ್ಟೊಂದು ಪರಿಣಾಮಕಾರಿಯಾಗಿ ಇಲ್ಲದಿರುವುದರಿಂದ ಬೇಗ ನರರೋಗ ಅಥವಾ ಮನೋರೋಗ ವೈದ್ಯರಿಗೆ ತೋರಿಸಿ ತಪಾಸಣೆ ಮಾಡಿಸಬೇಕು. ರೋಗ ಬಂದ ಮೇಲೆ ಪರಿಹಾರ ಹುಡುಕುವುದಕ್ಕಿಂತ, ರೋಗವು ಬರದಂತೆ ತಡೆಗಟ್ಟುವುದು ಹೆಚ್ಚು ಕ್ಷೇಮಕರ.

ಲಕ್ಷಣಗಳು: ಮೊದಮೊದಲು ಲಕ್ಷಣಗಳು ಕಡಿಮೆ ಇರುತ್ತವೆ. ವ್ಯಕ್ತಿಗೆ ಗೊತ್ತಾಗುವುದೇ ಇಲ್ಲ, ಆದರೆ ಆತಂಕ ಇರುತ್ತದೆ, ನಿರ್ಲಕ್ಷ್ಯ ಮಾಡಿಬಿಡುತ್ತಾರೆ. ಮನೆಯವರು ಈ ಲಕ್ಷಣ ಮತ್ತು ಸೂಚನೆಗಳನ್ನು ಗಮನಿಸಬೇಕು, ಮೆದುಳಿನ ಮುಂಭಾಗದ (Frontal lobe) ನರಗಳ ನರತಂತುಗಳು (neurons) ಮೊದಮೊದಲು ಕಡಿಮೆ ಆಗುತ್ತಾ ಹೋಗುವುದರಿಂದ, ಮೊದಲು ಹೊಸ ವಿಷಯಗಳ ನೆನಪು (Recent memory loss) ಕಡಿಮೆ ಆಗುತ್ತದೆ,

*ಆಗ ತಾನೆ ತಿಂದಿರುವುದು ಮರೆಯುತ್ತಾರೆ. * ಕೇಳಿದ್ದೇ ಕೇಳುವುದು, ಹೇಳಿದ್ದೇ ಹೇಳುವುದು. ಇಟ್ಟ ವಸ್ತುಗಳ ಜಾಗ ಮರೆಯುವುದು, ತಪ್ಪಾಗಿ ಇನ್ನೆಲ್ಲೋ ಹುಡುಕುವುದು, ಬೆಳಿಗ್ಗೆ ತಿಂದ ತಿಂಡಿ ಮರೆಯುವುದು, ೨, ೩ ಸರಿ ಜ್ಞಾಪಿಸಿಕೊಳ್ಳಬೇಕು. * ತುಂಬಾ ನಿಧಾನ ಆಗುತ್ತಾರೆ. * ಸ್ವಚ್ಛತೆ ಬಗ್ಗೆ ಕಾಳಜಿ ಕಡಿಮೆ ಆಗುತ್ತದೆ, ಅವರ ಆರೈಕೆ ಅವರೇ ಸರಿಯಾಗಿ ಮಾಡಿಕೊಳ್ಳದಿರುವುದು. * ಸುಮ್ಮನಾದ್ರು ಅಲೆದಾಡೋತರ ಆಚೆ ಹೋಗೋದು, ಒಳಗಡೆ ಬರೋದು. ದೈನಂದಿನ ಚಟುವಟಿಕೆಯಲ್ಲಿ ಅಡೆತಡೆ ತೋರುತ್ತದೆ: ವಿದ್ಯುತ್ ಬಿಲ್, ನೀರಿನ ಬಿಲ್ ಕಟ್ಟುತ್ತಿದ್ದವರು, ಮನೆಯ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದವರ ನಡವಳಿಕೆಯಲ್ಲಿ ನಾಜೂಕುತನ ಕಡಿಮೆ ಆಗುತ್ತಿರುತ್ತದೆ. ದಿನ, ವಾರ, ವರ್ಷ, ಸಮಯ ತಿಳಿಯುವುದಿಲ್ಲ. ಗೊಂದಲವಾಗುತ್ತಿರುತ್ತದೆ.

ಇನ್ನೂ ಕೆಲವು ವರ್ಷಗಳು ಕಳೆದಲ್ಲಿ, ಕ್ರಮೇಣ ನೋಡಿಕೊಳ್ಳುವವರಿಗೆ ಆತಂಕ ಹೆಚ್ಚಾಗುತ್ತದೆ, ಡಿಮೆನ್ಷಿಯ ಇದೆ ಎಂದರೆ ನಂಬಲು ಆಗುವುದೇ ಇಲ್ಲ ಏಕೆಂದರೆ ಹಳೆಯ ನೆನಪುಗಳು ಚೆನ್ನಾಗಿ ಜ್ಞಾಪಕವಿರುತ್ತದೆ.

ಸ್ವಭಾವದಲ್ಲಿ ಬದಲಾವಣೆ: ಮೊದಲು ತೂಕವಾಗಿ ಮಾತಾಡುತ್ತಿರುವವರು ನಂತರದಲ್ಲಿ, ಯಾರಾದ್ರು ಮನೆಗೆ ಬಂದರೆ ಮನೆ ರಹಸ್ಯಗಳನ್ನು ಹೇಳಿಬಿಡೋದು ಅಥವಾ ಅವರು ಉಟ್ಟಿರುವ ಸೀರೆ ಇಷ್ಟ ಆಗದೇ ಯಾಕೋ ಈ ಸೀರೆ ಚೆನ್ನಾಗಿಲ್ಲಾ ಅನ್ನುವುದು, ವ್ಯತ್ಯಾಸವಾಗಿ ಮಾತಾಡೋದು.

ದಾರಿ ತಿಳಿಯುವುದಿಲ್ಲ (Geographical disorientation): ಆಚೆಗೆ ಹೋದ್ರೆ ಮನೆಗೆ ಬರಕ್ಕೆ ಗೊತ್ತಾಗಲ್ಲ, ತಕ್ಷಣ ಕೇಳಿದ್ರೆ ವಿಳಾಸ ಹೇಳಕ್ಕೆ ಗೊತ್ತಾಗಲ್ಲ. ದಾರಿ ತಪ್ಪಿಸಿಕೊಳ್ಳುವುದು, ಅನಂತನಾಗ್ ನಟಿಸಿದ, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಇಲ್ಲಿ ನೆನಪಿಸಿಕೊಳ್ಳಬಹುದು. * ಕಲಿತಿರುವುದು ಮರೆಯುತ್ತದೆ, ಕಾಫಿ ಮಾಡಲು ಹೋಗಿ, ಗ್ಯಾಸ್ ಆಫ್ ಮಾಡಲು ಮರೆಯುವುದು, ಹೊಸದನ್ನು ಕಲಿಯುವುದು ಕಷ್ಟ ಆಗುತ್ತದೆ. ೩ ಸಾಮಾನುಗಳನ್ನು ಹೇಳಿ, ೧೫ ನಿಮಿಷ ಬಿಟ್ಟು ಕೇಳಿದ್ರೆ ಅವರಿಗೆ ಗೊತ್ತಾಗಲ್ಲ. ಯಾವುದು ಆದ ಮೇಲೆ ಯಾವುದು ಎಂದು ಮರೆಯುತ್ತಾರೆ (Sequencing) , ಕೋಪ ಶುರುವಾಗುತ್ತದೆ, ನಿದ್ರೆ ತೊಂದರೆ ಶುರುವಾಗುವುದು.

ತುಂಬಾ ಹಳೆಯ ನೆನಪುಗಳು ಮೆದುಳಿನ ಹೊರ ಪದರದಲ್ಲಿ(Frontal cortex) ಇರುತ್ತದೆ. ಮರೆವು ಪ್ರಾರಂಭವಾದ ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಈ ಹಳೆಯ ನೆನಪುಗಳೂ ಕಡಿಮೆಯಾಗಿ ತೀವ್ರತರನಾದ ಲಕ್ಷಣಗಳು ಶುರುವಾಗುತ್ತದೆ.

*ಒಬ್ಬರೇ ಇರಲು ಇಷ್ಟ ಪಡುವುದು (Socially isolate) *ಊಟ, ತಿಂಡಿಯಲ್ಲಿ ಏರುಪೇರು ಆಗುವುದು, ತೂಕ ಕಡಿಮೆಯಾಗುವುದು * ನಡೆದಾಡುವುದು ಕಷ್ಟವಾಗುತ್ತದೆ *ತೀವ್ರವಾದ ಮಾನಸಿಕ ತೊಂದರೆಗಳು *ಮೂತ್ರವಿಸರ್ಜನೆಯಲ್ಲಿ ನಿಯಂತ್ರಣವಿಲ್ಲದಿರುವುದು. *ಹ್ಯಾಲೋಜೆನೇಶನ್ (Halogenation) ಕಿವಿ, ಕಣ್ಣು ಮಂದ ಆಗುತ್ತಿರುತ್ತದೆ. ಬೇರೆಯವರಿಗೆ ಕೇಳಿಸದೇ ಇರುವ ಶಬ್ದಗಳು ಕೇಳಿಸುತ್ತವೆ, ಕಾಣಿಸದ ವಸ್ತುಗಳು ಕಾಣಿಸುವುದು. *ಕುಟುಂಬದ ಸದಸ್ಯರನ್ನು ಮರೆವುದು ಶುರುವಾಗುತ್ತದೆ. ಕೊನೆಗೆ ಅವರನ್ನೇ ಅವರು ಮರೆಯುತ್ತಾರೆ.

ಚಿಕಿತ್ಸೆಗಳು: ಕುಟುಂಬದವರು ವಯಸ್ಸಾಯಿತು, ಮರೆವು ಶುರುವಾಯ್ತು ಅಂತ ತಡಮಾಡುತ್ತಾರೆ. ಆದರೆ ಆ ರೀತಿ ತಿಳಿಯಬಾರದು. ಏಕೆಂದರೆ ಇದರಲ್ಲಿ ೨ ರೀತಿ ಇರುತ್ತದೆ. ಗುಣಪಡಿಸಬಹುದಾದ (Treatable) ಮತ್ತು ಗುಣಪಡಿಸಲಾಗದ
(Untreatable) ಕಾರಣಗಳು.

ಬಿ.ಪಿ., ಕೊಲೆಸ್ಟ್ರಾಲ್ ಹೆಚ್ಚಿದ್ದಲ್ಲಿ, ವಿಟಮಿನ್ B೬, B೧೨ಗಳ ಕೊರತೆಯಾದಲ್ಲಿ, ಡಾಕ್ಟರರ ಸಲಹೆಯ ಮೇರೆಗೆ, ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಪೋಷಕರು, ಮಕ್ಕಳನ್ನು ಬೆಳೆಸುವುದರಲ್ಲಿ ಮಾದರಿಯಾಗಿರಬೇಕು. ಯುವಪೀಳಿಗೆಯವರು, ಸಿಗರೇಟು ಸೇವನೆಗಳಿಂದ ದೂರವಿರಬೇಕು, ಆಗಲೇ ಶುರು ಆಗಿದ್ದಲ್ಲಿ, ನಿಲ್ಲಿಸಬೇಕು. ಸಿಗರೇಟು ಸೇವನೆ Gateway drug ತರಹ. ಇದಕ್ಕೆ ಮದ್ಯ, ಮಾದಕ ವಸ್ತು, ತಂಬಾಕು ಎಂದು ಒಂದೊಂದೇ ಸೇರಿಕೊಳ್ಳುತ್ತದೆ. ಹವ್ಯಾಸ, ಮೋಜು, ಮಸ್ತಿಗೆ ಶುರುವಾದದ್ದು ಚಟವಾಗಿರಬಹುದು ಅಥವಾ ಖಿನ್ನತೆಯಿಂದಾಗಿ ಈ ಚಟಗಳಿಗೆ ಮೊರೆಹೋಗಬಹುದು. ಆದಷ್ಟು ಬೇಗ ಮನೋವೈದ್ಯರ ಹತ್ತಿರ ಹೋಗಿ ಆಪ್ತಸಮಾಲೋಚನೆ ಮಾಡಿಸಿಕೊಳ್ಳಬೇಕು. ಅಪಘಾತವಾದಾಗ ತಲೆಗೆ ಪೆಟ್ಟಾಗುವ ಸಾಧ್ಯತೆಗಳಿರುತ್ತದೆ. ಅದರಿಂದ ಜ್ವರ, ವಾಂತಿ ಹೆಚ್ಚಾದಾಗ, ಮೆದುಳಿನಲ್ಲಿ ಗಡ್ಡೆ, ಸೋಂಕು, ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳು, AIDS, HIV, ಪಾರ್ಶವಾಯುಗಳಿಂದಲೂ ಮೆದುಳಿಗೆ ಹಾನಿಯಾಗಬಹುದು. ಇವುಗಳನ್ನು ಹಾಗೇ ಬಿಟ್ಟು ಬಿಟ್ಟಲ್ಲಿ ಡಿಮೆನ್ಷಿಯ ಬರುವ ಸಾಧ್ಯತೆಗಳು ಹೆಚ್ಚುತ್ತಾ ಹೋಗುತ್ತದೆ.

ಕೆಲಸದಲ್ಲಿ ಏಕಾಗ್ರತೆ ಕೊರತೆ, ಸರಿಯಾಗಿ ಯೋಜನೆ ಮಾಡದೆ, ಎಲ್ಲಾ ಕೆಲಸದಲ್ಲೂ ಕೈ ಹಾಕುವುದು, ವಿಪರೀತ ಆತಂಕ ಮಾಡಿಕೊಳ್ಳೋದು ಇವೆಲ್ಲ ಬದಲಿಸಿ, ಆದ್ಯತೆ ಮೇರೆಗೆ ಕೆಲಸ ಮಾಡಿ ಒತ್ತಡಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು, ವಾಯುವಿಹಾರ, ಯೋಗ, ಪ್ರಾಣಾಯಾಮ, ನಮಗೋಸ್ಕರ ಸಮಯವನ್ನು ನಿಗದಿಪಡಿಸಿ ಕೊಳ್ಳುವುದು, ವಿಶ್ರಾಂತಿ ತೆಗೆದುಕೊಳ್ಳುವುದು, ಕಷ್ಟ ಸುಖಗಳನ್ನು ಒಬ್ಬರ ಹತ್ತಿರ ಹೇಳಿಕೊಳ್ಳುವುದು, ಕಛೇರಿ ಕೆಲಸ ಮತ್ತು ಮನೆ ಕೆಲಸಗಳನ್ನು ಸರಿದೂಗಿಸಿಕೊಂಡು, ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು.

ಹೋಮೋಸಿಸ್ಟಿನ್ (Homocysteine) ಕಡಿಮೆ ಮಾಡುವಂತಹ ಆಹಾರ (ಸೊಪ್ಪು, ಕಾಳು, ತರಕಾರಿಗಳು, ಬೀನ್ಸ್) ತೆಗೆದುಕೊಳ್ಳಬೇಕು. ಏಕೆಂದರೆ ಅವು ನರತಂತುಗಳನ್ನು ಸರಿಪಡಿಸುವಲ್ಲಿ ಸಹಾಯ ಮಾಡುತ್ತವೆ. ಆದಷ್ಟು ಕೂಡಿಸಿ ಊಟ ಕೊಡಬೇಕು. ಗುಣ ಪಡಿಸಲಾಗದ ಡಿಮೆನ್ಷಿಯಾದಲ್ಲಿ, ಡಾಕ್ಟರರ ಸಲಹೆಯಂತೆ ಕೆಲವು ಮಾತ್ರೆಗಳಿಂದ, ಹೆಚ್ಚುತ್ತಿರುವ ಮರೆವನ್ನು ನಿಯಂತ್ರಿಸಬಹುದು.

ಆರೈಕೆ ನೀಡುವವರು: ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣ ಇಲಾಖೆ, ಇತರ ಖಾಸಗಿ ಕೇಂದ್ರಗಳಲ್ಲಿ, ಡಿಮೆನ್ಷಿಯ ಇರುವವರನ್ನು ನೋಡಿಕೊಳ್ಳುವ ಸಂಸ್ಥೆಗಳಿವೆ. ಆದರೆ ಮನೆಯಲ್ಲಿ ಆರೈಕೆ ಮಾಡಿದಂತೆ ಬೇರೆಯವರು ಮಾಡುವುದು ಕಷ್ಟ ಆಗುತ್ತದೆ. ಮನೆಯಲ್ಲಾದರೂ ಒಬ್ಬರೇ ನೋಡಿಕೊಳ್ಳುವುದು ಕಷ್ಟ ಆಗುತ್ತದೆ. ಸಾಮಾಜಿಕ ಬೆಂಬಲ ಇರಬೇಕು. ಮಕ್ಕಳು, ಮನೆಯವರೂ ನೋಡಿಕೊಳ್ಳುವ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಯಾರಾದರೂ ಸಹಾಯಕರನ್ನು ಜೊತೆಗೆ ಇಟ್ಟುಕೊಳ್ಳಬಹುದು. ನೋಡಿಕೊಳ್ಳುವವರ ಮಾನಸಿಕ ಬೆಂಬಲ, ಆರೈಕೆ ತುಂಬಾ ಮುಖ್ಯ ಅಲ್ಲದೆ ಅವರಿಗೆ ಮರೆವಿದೆ ಎಂದು ಯಾವುದರಲ್ಲೂ ಭಾಗಿಯಾಗದ ಹಾಗೆ ಮೂಲೆಗುಂಪು ಮಾಡಬಾರದು. ಒಳ್ಳೆ ಹುದ್ದೆಗಳಲ್ಲಿ ಇದ್ದವರಿಗೆ, ಸ್ವಾಭಿಮಾನ ತುಂಬಾ ಇರುತ್ತದೆ, ಆತ್ಮವಿಶ್ವಾಸ ಇರುತ್ತದೆ. ಅವರು ಉಪಾಧ್ಯಾಯರು, ಪೋಲೀಸ್, ಡಾಕ್ಟರ್ ಇದ್ದಿರಬಹುದು. ಆದರೆ ಅವರಿಗೆ ಮರೆವಿದೆ ಎಂದು ಕುಟುಂಬದವರು ಅವರನ್ನು ‘ಈ ದಿನ ಯಾವ ವಾರ, ಯಾವ ದಿನ’ ಅಂತ ಪದೇ ಪದೇ ಕೇಳುತ್ತಿದ್ದರೆ ಅವರಿಗೆ ಆತಂಕ ಹೆಚ್ಚುತ್ತದೆ.

ಅವರ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕು. ಅವರಿಗೆ ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸಲು ಬಿಡಬೇಕು. ಜೊತೆಗೆ ಕುಳಿತು ಮಾತನಾಡುವುದು, ಸಮಯ ಕಳೆಯುವುದು, ವಾಕಿಂಗ್ ಮಾಡಿಸುವುದು, ಮನೆಯ ಕೆಲಸಗಳಲ್ಲಿ ಅವರನ್ನೂ ತೊಡಗಿಸಿಕೊಳ್ಳುವುದು, ಸೊಪ್ಪು ಬಿಡಿಸುವುದು, ತೆಂಗಿನಕಾಯಿ ತುರಿಯುವುದು ಇತ್ಯಾದಿ ಅವರಿಗೆ ಇಷ್ಟವಾಗುವ ಸಣ್ಣ ಸಣ್ಣ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುವುದು. ಅವರು ಚೆನ್ನಾಗಿ ಮಾಡಿದಾಗ ಹೊಗಳಿ ಪ್ರೋತ್ಸಾಹಿಸೋದು, ಇವೆಲ್ಲವೂ ಮೆದುಳಿನ ಕಾರ್ಯ- ಕ್ಷಮತೆಯನ್ನು ವೃದ್ಧಿ ಮಾಡುತ್ತದೆ ಅಲ್ಲದೆ ಮೆದುಳಿನ ಕಾರ್ಯಕ್ಷಮತೆ ಕ್ಷೀಣಿಸುವುದನ್ನು ನಿಧಾನ ಮಾಡಬಹುದು. ಇಲ್ಲದಿದ್ದರೆ ಅದು ಖಿನ್ನತೆಗೆ ತಿರುಗಿದಲ್ಲಿ ಇನ್ನೂ ಸಂದಿಗ್ಧ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಕುಟುಂಬಗಳಲ್ಲಿ ಹಿರಿಯರ ಬಗ್ಗೆ ಕಾಳಜಿ ಮಾಡುವುದು ಅತ್ಯವಶ್ಯ.

ಸ್ವಾಮಿನಿಷ್ಠೆ

ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಪ್ರೊ. ಗಾಲ್‌ಬ್ರೆತ್ ಅವರು ಮೊದಲು ಹಾರ್‌ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಒಂದು ದಿನ ಅವರು ತಮ್ಮ ಉಪನ್ಯಾಸವನ್ನು ಮುಗಿಸಿದ ನಂತರ, ತಮ್ಮ ಮಹಿಳಾ ಕಾರ್ಯದರ್ಶಿಯನ್ನು ಕರೆದು, “ನಾನೀಗ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ. ಯಾರೂ ನನ್ನನ್ನು ತೊಂದರೆಪಡಿಸದಂತೆ ನೋಡಿಕೋ” ಎಂದು ಹೇಳಿದರು. ಅವರು ಮಲಗಿಕೊಂಡ ಸ್ವಲ್ಪ ಹೊತ್ತಿನಲ್ಲೇ ಫೋನಿನ ಗಂಟೆ ಕಿರುಗುಟ್ಟಿತು. ರಿಸೀವರ್ ಎತ್ತಿಕೊಂಡು ಮಾತನಾಡುವುದಿಲ್ಲ ಎಂದು ತಿಳಿಸಿದಳು. ಆದರೆ ಆ ಕಡೆಯ ಧ್ವನಿ ಗುಡುಗಿತು “ನಾನು ಯಾರೆಂಬುದು ಗೊತ್ತೇ? ನಾನು ಲಿಂಡನ್ ಜಾನ್ಸನ್, ಅಮೆರಿಕದ ರಾಷ್ಟ್ರಪತಿ ಮಾತನಾಡುತ್ತಿರುವುದು.”
ಮಹಿಳಾ ಕಾರ್ಯದರ್ಶಿಯೂ ಅಷ್ಟೆ ಒರಟಾಗಿ ಉತ್ತರಿಸಿದಳು. “ನಾನು ಕೆಲಸ ಮಾಡುತ್ತಿರುವುದು ಪ್ರೊ, ಗಾಲ್‌ ಬ್ರೆತ್‌ರಿಗಾಗಿ, ಅಮೆರಿಕದ ರಾಷ್ಟ್ರಪತಿಗಾಗಿ ಅಲ್ಲ” ಇಷ್ಟು ಹೇಳಿದವಳೇ ರಿಸೀವರನ್ನು ಕುಕ್ಕಿಬಿಟ್ಟಳು.
ಅವಳ ಸ್ವಾಮಿನಿಷ್ಠೆಯಿಂದ ಜಾನ್ಸನ್‌ರವರು ಎಷ್ಟೊಂದು ಪ್ರಭಾವಿತರಾದರೆಂದರೆ ಮರುದಿನವೇ ಅವರು ಗಾಲ್‌ ಬ್ರೆತ್‌ರನ್ನು ಕರೆಯ ಕಳುಹಿಸಿ ಅವಳ ಸೇವೆಯನ್ನು ಶ್ವೇತಭವನಕ್ಕೆ ಒದಗಿಸಿಕೊಡಬೇಕೆಂದು ಪ್ರಾರ್ಥಿಸಿದರಂತೆ.

Comments

No comments yet. Why don’t you start the discussion?

Leave a Reply

Your email address will not be published. Required fields are marked *