ನಿಮ್ಮ ಮಗು ಓದಿನಲ್ಲಿ ಹಿ೦ದಿದೆಯೇ?

(ಡಿಸೆಂಬರ್‌ ೨೦೧೮, ಕಸ್ತೂರಿ, ಕನ್ನಡ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

೨೦೦೭ರಲ್ಲಿ ಬಿಡುಗಡೆಯಾದ ಬಾಲಿವುಡ್‌ ಚಿತ್ರ ‘ತಾರೇ ಜ಼ಮೀನ್‌ ಪರ್‌’ ನೋಡಿದವರಿಗೆಲ್ಲ ಕಲಿಕಾ ತೊಂದರೆ ಇರುವ ಹುಡುಗನ ಪರಿಚಯ ಚೆನ್ನಾಗಿಯೇ ಇರುತ್ತದೆ. ಈ ಚಿತ್ರ ಬರುವ ಮುನ್ನ ಕಲಿಕಾ ಸಾಮರ್ಥ್ಯ ಕಡಿಮೆ ಇರುವ ಮಕ್ಕಳನ್ನು ದಡ್ಡರೆಂದೇ ಪರಿಗಣಿಸಲಾಗುತ್ತಿತ್ತು. ಎಷ್ಟೋ ಮಕ್ಕಳು ಇತರ ಚಟುವಟಿಕೆಗಳಲ್ಲಿ ಪ್ರತಿಭಾನ್ವಿತರಾದರೂ ಓದು, ಬರಹದಲ್ಲಿ ಹಿಂದುಳಿದಿರುತ್ತಾರೆ. ಇದಕ್ಕೆ ಕಾರಣ ಡಿಸ್ಲೆಕ್ಸಿಯಾ ಎಂಬುದು ಬಹಳ ಜನರಿಗೆ ಗೊತ್ತಾಗಿದ್ದೇ ಈ ಚಿತ್ರದಿಂದ ಎಂದರೂ ತಪ್ಪಾಗಲಾರದು. ವೈದ್ಯಕೀಯ ಕ್ಷೇತ್ರದಲ್ಲಿ ನೋಬೆಲ್‌ ಪ್ರಶಸ್ತಿ ಪಡೆದ ಡಾ. ಕ್ಯಾರೋಲ್‌ ಗ್ರೀಡರ್‌ ಸಹ ಈ ಸ್ಥಿತಿಯ ಅನುಭವನ್ನು ಪಡೆದವರು. ಮುಂದೆ ಇವರು ಟೆಲೋಮೆರ್ಸ್ ಅಥವಾ ವರ್ಣತಂತುಗಳನ್ನು ಹೇಗೆ ರಕ್ಷಿಸುತ್ತವೆ ಎನ್ನುವಂಥ ವಿನೂತನ ವಿಷಯವನ್ನು ಸಂಶೋಧಿಸಿದರು.

ಡಾ. ಕ್ಯಾರೋಲ್‌ ಹುಟ್ಟಿದ್ದು ವಿಜ್ಞಾನಿಗಳ ಕುಟುಂಬದಲ್ಲೇ. ಈಕೆಯ ತಂದೆ ಭೌತಶಾಸ್ತ್ರ ಪೊಫೆಸರ್‌, ತಾಯಿ ಸಸ್ಯಶಾಸ್ತ್ರದಲ್ಲಿ ಪಿ.ಹೆಚ್.ಡಿ ಪಡೆದವರು. ತಾಯಿಯನ್ನು ಕಳೆದುಕೊಂಡಾಗ ಇವರಿನ್ನೂ ಮೂದಲ ತರಗತಿಯಲ್ಲಿ ಓದುತ್ತಿದ್ದರು. ಅಣ್ಣ ಎರಡನೇ ತರಗತಿಯಲ್ಲಿದ್ದ. ಹೀಗಾಗಿ ಬೆಳಿಗ್ಗೆ ಬೇಗನೆ ಏಳುವುದು, ಶಾಲೆಗೆ ಹೋಗಲು ಸಿದ್ಧರಾಗುವುದನ್ನು ಅವರು ಕಲಿಯಲೇಬೇಕಾಯಿತು. ಶಾಲಾ ದಿನಗಳೂ ಅಷ್ಟು ಸುಲಭವಾಗಿರಲಿಲ್ಲ. ಅಕ್ಷರಗಳನ್ನು ಕೂಡಿಸಿ ಪದಗಳನ್ನು ಓದಲು ಬರುತ್ತಿರಲಿಲ್ಲ. ಹೀಗಾಗಿ ಅವರನ್ನು ವಿಶೇಷ ಕಲಿಕೆಗಾಗಿ ಪರಿಹಾರ ಬೋಧನೆಯನ್ನೂ ಕೊಡಿಸುತ್ತಿದ್ದರು. ಇದಕ್ಕಾಗಿ ‘ತರಗತಿಯಿಂದ ಇವರೊಬ್ಬರೇ ಬೇರೆ ಹೋಗಬೇಕಾಗುತ್ತಿತ್ತು. ಇದು ಅವರಿಗೆ ಬಹಳ ಮುಜುಗುರ ಉಂಟು ಮಾಡುತ್ತಿತ್ತು. ಇಡೀ ತರಗತಿಯಲ್ಲಿ ನಾನೊಬ್ಬಳೇ ದಡ್ಡ ವಿದ್ಯಾರ್ಥಿನಿ ಎಂದೇ ಡಾ. ಕ್ಯಾರೋಲ್‌ ಭಾವಿಸಿದ್ದರು. ಸ್ಪೆಲ್ಲಿಂಗ್‌ ತೊಂದರೆ ಮತ್ತು ಅಕ್ಷರಗಳನ್ನು ಸೇರಿಸಿ ಓದಲು ಬಾರದಿರುವುದು ದಡ್ಡತನವಲ್ಲ ಎಂಬುದು ಕ್ರಮೇಣ ಅವರಿಗೆ ಅರಿವಾಗಲಾರಂಭಿಸಿತು. ನಂತರ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನಗಳಿಸಿದರೂ, ಪ್ರಯೋಗಾಲಯದ ಅನುಭವ ಸಾಕಷ್ಟು ಇದ್ದರೂ ‘ಎಸ್‌.ಎ.ಟಿ’ ಮತ್ತು ‘ಜಿ.ಆರ್‌.ಇ’ ಗಳಿದ್ದ ಕಾರಣ ಅನೇಕ ಶಾಲೆಗಳು ಇವರ ಅರ್ಜಿಯನ್ನು ತಿರಸ್ಕರಿಸಿದ್ದವು.

ಆದರೆ ಯು.ಸಿ. ಬರ್ಕೆಲಿ ವಿಶ್ವವಿದ್ಯಾಲಯವು ಅವರ ಅರ್ಜಿ ಸ್ವೀಕರಿಸುವ ಮೂಲಕ ಸಂಶೋಧನೆಗೆ ದಾರಿ ಮಾಡಿ ಕೊಟ್ಟಿತು. ಟೆಲೋಮೆರ್ಸ್‌, ವರ್ಣತಂತುಗಳನ್ನು ಹೇಗೆ ರಕ್ಷಿಸುತ್ತವೆ ಎಂಬ ವಿನೂತನ ವಿಷಯವನ್ನು ಡಾ. ಕ್ಯಾರೋಲ್‌ ಕಂಡು ಹಿಡಿದರು. ಪರಿಣಾಮ ಸ್ಪರೂಪ ಇಂದು ಮುಪ್ಪು ಕ್ಯಾನ್ಸರ್‌ ಮತ್ತು ಇತರೆ ಆನುವಂಶಿಕ ಕಾಯಿಲೆಗಳನ್ನು ನಿಖರವಾಗಿ ತಿಳಿಯುವಲ್ಲಿ ಈ ಆವಿಷ್ಕಾರ ಸಹಕಾರಿಯಾಗಿರುವುದು ವಿಶೇಷ. ಇದರಿಂದಾಗಿ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ನಮ್ಮ ಸಾಮರ್ಥ್ಯವನ್ನು ತಿಳಿಸುವುದಿಲ್ಲ ಎಂಬ ನಂಬಿಕೆ ಅವರಲ್ಲಿ ಬಲವಾಗಿ ಬೇರೂರಿತು. ವಿಶ್ವ ವಿದ್ಯಾಲಯಗಳಲ್ಲಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ಮಾನದಂಡವನ್ನಾಗಿಸುವುದನ್ನು ಮೀರಿ ಆಯ್ಕೆ ಪ್ರಕ್ರಿಯೆ ನಡೆಯಬೇಕು ಎಂಬ ವಾದವೇನಾದರೂ ನಡೆದರೆ ಡಾ. ಕ್ಯಾರೋಲ್‌ ಸಮರ್ಥ ವಕೀಲರಾಗಿ ಬಿಡುತ್ತಾರೆ ಎಂದೂ ಹೇಳಲಾಗುತ್ತದೆ.

ಕಾಯ್ದೆ ಅನುಷ್ಠಾನ

ನಮ್ಮಲ್ಲಿ ಇಂಥ ಎಷ್ಟು ಪ್ರತಿಭೆಗಳು ಸಮಾಜದ ಉನ್ನತಿಗೆ ಕೊಡುಗೆ ನೀಡಿದ್ದಾರೆ ?. ಆದರೆ ಇವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ನಮ್ಮ ಪ್ರಯತ್ನ ಎಲ್ಲಿದೆ? ಮತ್ತು ಎಷ್ಟಿದೆ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಇದಕ್ಕಾಗಿ ೨೦೧೬ರಲ್ಲಿ ಸರ್ಕಾರ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಿದೆ. ಅವುಗಳ ಕುರಿತು ಅರಿವು ಬೆಳೆಸಿಕೊಂಡು ಅನುಷ್ಠಾನಕ್ಕೆ ತರುವುದರ ಜೊತೆಗೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಈ ಕಾಯ್ದೆಗಳ ಜಾರಿಯ ಉದ್ದೇಶ ಸಂಪೂರ್ಣ ಮತ್ತು ಸಾರ್ಥಕವಾಗುತ್ತದೆ. ೨೦೧೬ರ ಫೆಬ್ರವರಿ ೨೭ರಂದು ‘ದಿ ರೈಟ್ಸ್‌ ಆಫ್‌ ಪರ್ಸನ್ಸ ವಿತ್‌ ಡಿಸೇಬಿಲಿಟಿ ಆಕ್ಟ್ ೨೦೧೬’ ರಾಷ್ಟಪತಿಗಳ ಅನುಮತಿ ಪಡೆಯಿತು. ಅದರ ಗೆಜೆಟ್‌ ನೋಟಿಫಿಕೇಷನ್‌ ಸೆಕ್ಷನ್‌ (೨)ರ ಕ್ಲಾಸ್‌(೨ಸಿ)ನಲ್ಲಿರುವುದು ನಿರ್ದಿಷ್ಟ ನ್ಯೂನತೆ. ಇದರಡಿಯಲ್ಲಿ ಕ್ರಮ ಸಂಖ್ಯೆ (೨)ನೆಯದು ಭೌತಿಕ ನ್ಯೂನತೆ. ‌ ಈ ಡಿಸ್ಲೆಕ್ಸಿಯಾ ಒಂದು ಭೌತಿಕ ನ್ಯೂನತೆಯಾದ್ದರಿಂದ ಅದನ್ನು ನಿರ್ದಿಷ್ಟ ಕಲಿಕಾ ನ್ಯೂನತೆಯಡಿಯಲ್ಲಿ ಸೇರಿಸಲಾಗಿದೆ. ಒಂದೇ ಶಿಕ್ಷಣದ ಅಡಿ ಎಲ್ಲಾ ರೀತಿಯ ನ್ಯೂನತೆಯಿರುವ ಮಕ್ಕಳಿಗೆ ಸಮಾನ ಶಿಕ್ಷಣ ನೀಡುವ ಉದ್ದೇಶ ಈ ಕಾಯ್ದೆಯ ಜಾಪ್ಟರ್‌ ೩, ೧೬(೧)ರ ಅನ್ವಯ ತಿಳಿಸಲ್ಪಟ್ಟಿದೆ. ಅದರಂತೆ ಪ್ರತಿಯೊಂದೂ ಶಾಲೆಯಲ್ಲಿ ಈ ರೀತಿಯ ಮಕ್ಕಳಿಗೆ ಶಿಕ್ಷಣ ಕೊಡುವ ಸಲುವಾಗಿ, ವಿಶೇಷ ಶಿಕ್ಷಕರಿಂದ ಪರಿಹಾರ ಜೋಧನೆ ಕೊಡಿಸುವುದು ಮತ್ತು ಈ ಕಾಯಿದೆ ಪ್ರಾರಂಭವಾದ ಎರಡು ವರ್ಷದೊಳಗೆ ಸಮೀಕ್ಷೆಯನ್ನು ನಡೆಸುವುದು ಎಂದು ಉಲ್ಲೇಖಿಸಲಾಗಿದೆ.

ಸಹಕಾರ

ಡಿಸ್ಲೆಕ್ಸಿಯಾ ಇರುವವರಿಗೂ ಎಲ್ಲರಂತೆ ಆತಂಕ, ಕೋಪ ಮತ್ತು ಖಿನ್ನತೆಗಳು ಕಾಡುತ್ತವೆ. ಆದರೆ ಭಾಷೆಯ ತೊಂದರೆಯಿಂದಾಗಿ ಎಷ್ಟೋ ಬಾರಿ ಇವರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ತೊಂದರೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಪಾಲಕರ ಸಹಕಾರ ಮತ್ತು ಪ್ರೋತ್ಸಾಹ ಅತ್ಯಂತ ಅಗತ್ಯ. ಎಲ್ಲರಂತೆ ಅವರೂ ತಮ್ಮ ಭಾವನೆಗಳನ್ನು ಹೊರ ಹಾಕುವಲ್ಲಿ ಪೋಷಕರ ಬೆಂಬಲ ಅವಶ್ಯಕ. ಎಲ್ಲಕ್ಕಿಂತ ವಿಶೇಷವೆಂದರೆ ಡಿಸ್ಲೆಕ್ಸಿಯಾದ ಇರುವಿಕೆ ತಿಳಿದು ಅದಕ್ಕೆ ಪರಿಹಾರ ಪಡೆದು ಮುಂದೆ ಬಂದ ಅನೇಕರು ಕಷ್ಟದಲ್ಲಿರುವವರಿಗೆ ಸುಲಭವಾಗಿ ಸಹಾಯಹಸ್ತ ನೀಡಬಲ್ಲರು. ಇನ್ನೊಬ್ಬರಿಗೆ ನೆರವಾದಾಗ ದಕ್ಕುವ ಅನುಭವ, ಅನುಭೂತಿಗಳು ಅವರಲ್ಲಿ ಧನಾತ್ಮಕ ಭಾವನೆ ಹೆಚ್ಚಿಸುತ್ತದೆ. ತಾವು ಅನುಭವಿಸುವ ನೋವು, ನಿರಾಸೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಹಿಡಿತ ದೊರೆಯುತ್ತದೆ. ಈ ನಿಟ್ಟಿನಲ್ಲಿ ಡಿಸ್ಲೆಕ್ಸಿಯಾದ ಇರುವಿಕೆ ಇರುವವರಿಗೆ ಆತ್ಮಗೌರವನ್ನು ವೃದ್ಧಿಸಿ, ಅವರೂ ಸಹ ಎಲ್ಲರಂತೆ ಜೀವನೋತ್ಸಾಹದಿಂದ ಕಾರ್ಯ ನಿರ್ವಹಿಸುವಂತೆ ಮಾಡಬಲ್ಲ ಮತ್ತು ವಯಸ್ಸು ಆಧಾರಿತ ಸಾಮರ್ಥ್ಯಗಳು, ಬೇರೆ ಬೇರೆ ಮಟ್ಟದಲ್ಲಿ ಕಾಣ ಬರುತ್ತವೆ. ಅವುಗಳ ಪೈಕಿ ಕೆಲವು ಈ ಕೆಳಗಿನಂತಿವೆ.

* ಕುತೂಹಲ, *ತೀವ್ರ ಕಲ್ಪನಾ ಶಕ್ತಿ, * ಹೊಸ ವಿಷಯಗಳನ್ನು ಕಂಡು ಹಿಡಿಯುವ ಸಾಮರ್ಥ್ಯ, * ವಿಷಯದ ಸಾರಾಂಶವನ್ನು ಅರಿಯುವುದು, * ಹೊಸ ಪರಿಕಲ್ಪನೆಗಳ ಉತ್ತಮ ಗ್ರಹಣಶಕ್ತಿ * ಅಚ್ಚರಿಯನ್ನುಂಟು ಮಾಡುವ ಪ್ರೌಢಿಮೆ, * ವಯಸ್ಸಿಗೆ ಮೀರಿದ ಶಬ್ದಕೋಶಗಳ ಜ್ಞಾನ, * ಒಗಟುಗಳಿಗೆ ಪರಿಹಾರ ಹುಡುಕುವುದರಲ್ಲಿ ಉತ್ಸುಕತೆ, * ಕಟ್ಟಡದ ವಿವಿಧ ಮಾದರಿಗಳನ್ನು ರೂಪಿಸುವ ಪ್ರತಿಭೆ, * ಓದಿ ಹೇಳಿದ ಮತ್ತು ಕೇಳಿದ ವಿಷಯಗಳನ್ನು ನಿಖರವಾಗಿ ಗ್ರಹಿಸುವುದು.

ಕೊನೆ ಹನಿ

ಶತಕೋಟಿಗಿಂತ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದೇ ಒಂದು ದೊಡ್ಡ ಸವಾಲು. ಅದಲ್ಲದೇ ಮಕ್ಕಳಿಂದ ನಿರೀಕ್ಷೆಗಳೂ ಹೆಚ್ಚು ಈಗಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಒತ್ತಡ ಮತ್ತು ಆತಂಕಕ್ಕೊಳಗಾಗುವುದು ಸಹಜ. ಅದರಲ್ಲೂ ಕಲಿನಾ ನ್ಯೂನತೆ ಇರುವ ಮಕ್ಕಳಿಗಂತೂ ಇದು ಹೆಚ್ಚಿನ ಸಂಕಟವನ್ನುಂಟು ಮಾಡುತ್ತದೆ. ಈ ಕಾಯ್ದೆಯಡಿ ದೊರಕುವ ಸವಲತ್ತು. ಸೌಲಭ್ಯಗಳ ಅರಿವು, ಅಳವಡಿಕೆಯಾದಲ್ಲಿ ಎಲ್ಲೋ ಕಳೆದು ಹೋಗುತ್ತಿರುವ ಅನೇಕ ಸುಪ್ತ ಪ್ರತಿಭೆಗಳು ಹೊರಬರುತ್ತವೆ. ತನ್ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೊಸ ಚೈತನ್ಯ ಮೂಡುತ್ತದೆ.

(“ಲ್ಯಾಂಡ್ಮಾರ್ಕ್‌ ಸಮುದಾಯ ಯೋಜನೆ-ಫೆಬ್ರವರಿ ೨೦೧೮ರ ಡಿಸ್ಲೆಕ್ಕಿಕ್‌ ಅಡ್ವಾಂಟೇಜ್‌ ನ್ಯೂಸ್‌ ಲೆಟರ್‌ ಪತ್ರಿಕೆಯಿಂದ ಸಂಗ್ರಹ)

Comments

No comments yet. Why don’t you start the discussion?

Leave a Reply

Your email address will not be published. Required fields are marked *