ಅನೇಕ ರೀತಿಯ ಬುದ್ಧಿವಂತಿಕೆಗಳು

ಶಾಲೆಯಲ್ಲಿ ಎಲ್ಲರಿಗಿಂತ 
ಹೆಚ್ಚು ಅಂಕಗಳನ್ನು 
ಗಳಿಸುವುದು ಮಾತ್ರ 
ಬುದ್ಧಿವಂತಿಕೆಯಲ್ಲ!
………………………………………………
-‌ ರಮಾಮಣಿ ಪ್ರಭಾಕ‌ರ್

ಈಗಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ, ಒಂದು ಮಗುವು ಉತ್ತೀರ್ಣವೋ, ಅನುತ್ತೀರ್ಣವೋ ಎಂದು ನಿರ್ಧರಿಸುವುದಕ್ಕೆ ಇರುವುದು ಒಂದೇ ಒಂದು ನಿರ್ದಿಷ್ಟ ರೀತಿಯ ಮೌಲ್ಯಮಾಪನ. ಅದೇ ವರ್ಷದ ಕಡೆಯ ಪರೀಕ್ಷೆಯಲ್ಲಿ ಬರುವ ಅಂಕಗಳು. ಈ ರೀತಿಯ ಸಂಕುಚಿತ ಮಾನದಂಡ  ನಿಜಕ್ಕೂ ಅಪಹಾಸ್ಯಕರ, ಯಾವ ಮಗುವು ಈ ನಿರ್ದಿಷ್ಟ ವ್ಯವಸ್ಥೆಯ ಚೌಕಟ್ಟಿನಲ್ಲಿ
ಯೋಚಿಸುತ್ತದೆಯೋ, ವಿಷಯವನ್ನು ವಿಶ್ಲೇಷಿಸುತ್ತದೆಯೋ, ಬೇರೆ ವಿಷಯಗಳಲ್ಲಿ ಅಂದರೆ ಜನರ ಸಂಗಡ ಬೆರೆಯುವುದು ಮಾತಿನ ಚತುರತೆ ಇಲ್ಲದಿದ್ದರೂ ಸಹ ಇತರರಿಗಿಂತ ಓದಿನಲ್ಲಿ ಉತ್ತಮವಿದ್ದ ಪಕ್ಷದಲ್ಲಿ ಅಂತಹ ಮಗುವು ಶಾಲೆಯ ದೃಷ್ಟಿಯಲ್ಲಿ ಬುದ್ಧಿವಂತ ಎನಿಸಿಕೊಳ್ಳುತ್ತಿದೆ. ಸಧ್ಯ ನನ್ನ ಮಗು ಓದಿನಲ್ಲಿ ಎಲ್ಲರನ್ನು ಮೀರಿಸುತ್ತದೆ ಎಂಬ ಹೆಮ್ಮೆ ಪೋಷಕರಿಗೂ ಇರುತ್ತದೆ. ಉಳಿದ ಕೌಶಲ್ಯಗಳನ್ನು ಮುಂದೆ ಜೀವನದಲ್ಲಿ ಹೇಗೋ ಕಲಿಯುತ್ತಾರೆ ಎನ್ನುವ ನಂಬಿಕೆ.

ಆದರೆ, ಎಲ್ಲಾ ಸಂದರ್ಭಗಳಲ್ಲಿ ಈ ರೀತಿಯ ತಿಳುವಳಿಕೆ ತೊಂದರೆಗೀಡು ಮಾಡುತ್ತದೆ. ಶಾಲೆಯಲ್ಲಿ ಓದಿನಲ್ಲಿ ಸೈ ಎನಿಸಿಕೊಂಡ ಕೆಲವರಿಗೆ, ಓದು ಮುಗಿದ ನಂತರ ತಾವುಗಳು ಸಂಪೂರ್ಣ ಅಸಮರ್ಥ ಅಥವಾ ಡಮ್ಮೀ ಎಂದು ಅರಿವಾಗುತ್ತದೆ. ಏಕೆಂದರೆ ಇವರಿಗೆ ಅಸಾಧ್ಯವಾದ ಕೆಲಸಗಳನ್ನು ಇನ್ನು ಕೆಲವರು ಸುಲಲಿತವಾಗಿ ಮಾಡಬಲ್ಲ ಪ್ರೌಢಿಮೆಯನ್ನು ಹೊಂದಿರುತ್ತಾರೆ. ಅಂತಹವರು ಶಾಲೆಯಲ್ಲಿ ಓದಿನ ವಿಷಯದಲ್ಲಿ ಸೈ ಅನ್ನಿಸಿಕೊಳ್ಳಲೇ ಬೇಕೆಂದಿಲ್ಲ. ಅದು ಅವರಲ್ಲಿನ ಪ್ರತಿಭೆ.  ಅವರೇ ಶಾಲೆಯಲ್ಲಿ ವಿಫಲರೆಂದು ಪರಿಗಣಿಸಲ್ಪಟ್ಟಿರಬಹುದು. ಇದುವೇ ಈಗಿರುವ ವ್ಯವಸ್ಥೆಯ ಚೌಕಟ್ಟಿನಿಂದ ಆಚೆ ಇರುವ ಉಳಿದ ‘ಬುದ್ಧಿಶಕ್ತಿ’ಗಳ ಗುಂಪಿಗೆ ಸೇರಿದ ವಿಷಯಗಳ ವಿಶೇಷ.  ಅವುಗಳಲ್ಲಿ ಕೆಲವು ತರಹದ ಬುದ್ಧಿಶಕ್ತಿಗಳೆಂದರೆ, ಅಳತೆಗಳನ್ನು ನಿರ್ಧರಿಸುವುದು, ದಿಕ್ಕು ಗುರುತಿಸುವಲ್ಲಿ, ಯಂತ್ರಗಳ ಬಗೆಗಿನ ಬುದ್ಧಿಶಕ್ತಿ. 

ಉದಾಹರಣೆಗೆ ಒಂದು ಮೋಟಾರಿನಲ್ಲಿನ ತೊಂದರೆಯನ್ನು ಕೇವಲ ದೂರವಾಣಿ ಕರೆಯಲ್ಲಿಯೂ. ಸಹ ಮೋಟಾರಿನ ಶಬ್ದವನ್ನು ಕೇಳಿಯೇ ಇಂಥದ್ದೇ ಕಾರಣದಿಂದಾಗಿ ಮೋಟಾರು ಕೆಲಸ ಮಾಡುತ್ತಿಲ್ಲ ಎಂದು ನಿಖರವಾಗಿ ಹೇಳಬಲ್ಲ ಬುದ್ಧಿಶಕ್ತಿ. ಇಡೀ ಭೂಮಂಡಲದಲ್ಲಿ ಇದು ಸಾಧ್ಯವೇ ಎಂದು ಯಂತ್ರಜ್ಙರು ಹುಬ್ಬೇರಿಸುವಂತೆ ಮಾಡಬಲ್ಲ ಪ್ರತಿಭೆಗಳು. ಆದರೆ ಇಂತಹ ಪ್ರತಿಭೆಗಳು ಶಾಲೆಯ ವ್ಯವಸ್ಥೆಯಲ್ಲಿ ಎಲ್ಲೋ ಹುದುಗಿ ಹೋಗಿರುತ್ತಾರೆ. ಎಲೆ ಮರೆಯ ಕಾಯಿಯಂತೆ.  ಬುದ್ಧಿವಂತರಿದ್ದೂ ಇಲ್ಲದ ಹಾಗೆ ಎಲೆಯ ಹಿಂದೆಯೇ ಒಣಗಿ ಹೋಗಬಹುದಾದ ಪ್ರತಿಭೆಗಳು.

ವಿಪರ್ಯಾಸವೆಂದರೆ, ಇಂಥವರಿಗೆ ಅವರ ಮನಸ್ಸು ಕೆಲಸಮಾಡುವ ರೀತಿಗೆ ಸರಿಹೊಂದುವಂತೆ ನಮ್ಮ ವ್ಯವಸ್ಥೆಯಲ್ಲಿ
ಪರೀಕ್ಷೆಗಳಿಲ್ಲದಿರುವುದು. ಆದರೆ ಬೇರೆ ಮಾರ್ಗವಿಲ್ಲದೆ ಇರುವ ಪರೀಕ್ಷೆಗಳನ್ನೇ ತೆಗೆದುಕೊಂಡು ಅದರಲ್ಲಿ ತಾನು ಅನುತ್ತೀರ್ಣ ಎಂದು ಸಾಬೀತು ಪಡಿಸಿಕೊಳ್ಳಬೇಕಾದ ಅಸಹಾಯಕ ಪರಿಸ್ಥಿತಿ, ಅಂದರೆ ಅನರ್ಹ ರೀತಿಯ ಪ್ರತಿಭೆ ಹೊಂದಿರುವ ಪ್ರತಿಭಾವಂತರು. ಕೆಲವು ಸಂದರ್ಭಗಳಲ್ಲಂತೂ ಅವನನ್ನು ‘ಮೂರ್ಖ’ ಎಂದೇ ಪರಿಗಣಿಸಲಾಗುವುದು. ಈ ತರನಾದ ಒಂದೇ ಬುದ್ಧಿಶಕ್ತಿಯೇ ಸಮಂಜಸ ಎಂದು ಪ್ರತಿಪಾದನೆಯಾದಲ್ಲಿ ಉಳಿದವರು ʼಪರಕೀಯರುʼ ಎಂದೇ ದೃಢವಾಗುತ್ತದಲ್ಲವೇ? ಇಂತಹ ಅನೇಕ ಜನರನ್ನು ನಾವು ನಮ್ನ ಜೀವನದಲ್ಲಿ ನೋಡಿರಬಹುದು. 

ಶಾಲೆಯಲ್ಲಿ ಮಗುವು ಒಂದೇ ಜಾಗದಲ್ಲಿ ಕುಳಿತಿರಬೇಕು ಮತ್ತು ಗಂಭೀರವಾಗಿ ಕುಳಿತಿರಲು ಒತ್ತಿ ಒತ್ತಿ ಹೇಳಬೇಕು, ಇದುವೇ
ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ಕೊಡುವ ರೀತಿ ಎಂದು ನಂಬಿರುವೆವು.  ಈ ರೀತಿಯ ಅಭಿಪ್ರಾಯಕ್ಕೆ ನಾವು ಹೇಗೆ ಬಂದೆವು? ಅದೂ ಸಹ ಒಂದು ಮಗುವಿನ ವಿಷಯದಲ್ಲಿ!! ಗಂಭೀರವಾಗಿ ಕುಳಿತಿರುವುದು !!ಇದು ಯಾರಿಗಾದರೂ ಕಷ್ಟದ ಕೆಲಸ ಅದರಲ್ಲೂ ವಿಶೇಷವಾಗಿ ಅಲ್ಲಿ ಇಲ್ಲಿ ತಿರುಗಾಡುವ, ಹರಿದಾಡುವ ಮೃದು ಮನಸ್ಸಿಗೆ ಇದು ಸ್ವಲ್ಪವೂ ಸರಿ ಹೊಂದುವುದಿಲ್ಲ.

ಒಂದು ಸಾಹಸ ಕಲಿಕೆಯ ಸೇವಾಕೇಂದ್ರದಲ್ಲಿ ಸ್ವಯಂ ಸೇವೆ ಸಲ್ಲಿಸುತ್ತಿದ್ದಾಗ ನಡೆದ ಒಂದು ಘಟನೆಯ ಅನುಭವ. ವಿವಿಧ ರೀತಿಯ ಕಲ್ಲುಗಳನ್ನು ಸೇರಿಸುವ ಕೆಲಸದಲ್ಲಿ ತೊಡಗಿಸಲು ಮಕ್ಕಳುಗಳನ್ನು ಸಮುದ್ರದ ದಡಕ್ಕೆ ಕರೆದೊಯ್ಯಲಾಗಿತ್ತು. ಅನೇಕ ಮಕ್ಕಳು ಸಮುದ್ರದ ದಡವನ್ನೇ ನೋಡಿರಲಿಲ್ಲ. ಹಳ್ಳೀ ಕಡೆಯ ಪರಿಚಯವೇ ಇರಲಿಲ್ಲ. ಆ ಮಕ್ಕಳ ಗುಂಪಿನಲ್ಲಿ ಒಂದು ಮಗುವು ವಿಭಿನ್ನವಾಗಿತ್ತು ಮತ್ತು ಎಲ್ಲರ ಗಮನ ಅದರೆಡೆ ಸೆಳೆದಿತ್ತು. ಆ ಮಗು ಮೇಧಾವಿ. ಅಲ್ಲಿ ಇರುವ ಅಷ್ಟೂಹೊತ್ತು ಅವಳು ಶಿಕ್ಷಕನ ಜೊತೆ ಜೊತೆಗೇ ಇದ್ದಳು. ಶಿಕ್ಷಕರು ಆ ಮಗುವಿಗೆ ʼಇದು ಏನು? ಇದರ ಬಣ್ಣ ಏಕೆ ಹೀಗೆ?ʼ ಎಂದೆಲ್ಲಾ ಕೇಳಿದರೆ  ಆ ಮಗುವಿನದು ಪ್ರಚಂಡ ಊಹೆ ಮತ್ತು ಅವಳ ಉತ್ತರ ಯಾವಾಗಲೂ ಆಸಕ್ತಿ ಹುಟ್ಟಿಸುವಂತಿರುತ್ತಿತ್ತು. ಹೊಸದನ್ನು ಹುಡುಕುವುದು, ಹಿಡಿಯುವುದು, ಆರಿಸಿ ತೆಗೆಯುವುದು ಆಕೆಯ ಕೆಲಸವಾಗಿತ್ತು. ಒಂದೆರಡು ತಾಸಿನ ನಂತರ ಆಕೆಯ ತರಗತಿಯ ಶಿಕ್ಷಕರಿಗೆ ʼಆ ಮಗು ಮಹಾ ಮೇಧಾವಿʼ ಎಂದು ತಿಳಿಸಿದರೆ, ಶಿಕ್ಷಕ ʼಓ ಅವಳಾ? ತರಗತಿಯಲ್ಲಿ ಎಲ್ಲರಿಗಿಂತ ಕೊನೆಯ ಸ್ಥಾನ ಅವಳದು ಎಂದಾಗಿತ್ತು!

ಈ ರೀತಿ ಒಂದು ಮಗುವು ಅನುತ್ತೀರ್ಣ ಹೊಂದುತ್ತಿದ್ದರೆ, ಅದು ಮಗುವಿನ ತಪ್ಪಲ್ಲ. ವ್ಯವಸ್ಥೆಯಲ್ಲೇ ತಪ್ಪಿದೆ.  ಶಿಕ್ಷಕರನ್ನು
ಬೈಯುವ ಹಾಗಿಲ್ಲ.  ಏಕೆಂದರೆ ಆ ವ್ಯವಸ್ಥೆಗೇ ಆವರು ಪಾಠ ಹೇಳಬೇಕು. ಸಾಕಷ್ಟು ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವಿಭಿನ್ನ
ಬುದ್ಧಿವಂತಿಕೆಯನ್ನು ಕಂಡುಹಿಡಿದು ಅವರೊಂದಿಗೆ ಸೃಜನಶೀಲ ಕಲಿಕೆ ಕೊಡುವಲ್ಲಿ ಹತಾಶರಾಗಿದ್ದಾರೆ.  ಏಕೆಂದರೆ ಈ ರೀತಿ ಮಾಡುವುದಕ್ಕೆ ಅನೇಕ ಅಡೆತಡೆಗಳಿವೆ. ಆ ಮಗುವಿಗೆ ಹೋಲದ ವಿಭಿನ್ನ ಬುದ್ಧಿವಂತಿಕೆಗೆ ವಿನ್ಯಾಸ ಪಡಿಸಿದ ಪರೀಕ್ಷೆಯಲ್ಲಿ ಮಗು ಉತ್ತೀರ್ಣನಾಗದಿದ್ದರೆ ಅಂತಹ ಮಕ್ಕಳು ಆ ಶಾಲೆಯಲ್ಲಿ ಪರಕೀಯ ಎಂದು ಪರಿಗಣಿಸಲ್ಪಡುತ್ತಿದೆ. ಬರೀ ಶಾಲೆಯಿಂದಲ್ಲದೆ ಸಂಪೂರ್ಣ ವ್ಯವಸ್ಥೆಯಿಂದ! ಅಪಾಯವೆಂದರೆ ಸಾರ್ವಜನಿಕ ಜೀವನದಿಂದ, ನಂತರ ಸಮಾಜದಿಂದ, ಅಂತಿಮವಾಗಿ ಅವರಿಂದ ಅವರೇ ದೂರವಾಗುತ್ತಾರೆ. ಅವರಿಗೆ ಅವರೇ ಪರಕೀಯರಾಗುತ್ತಿದ್ದಾರೆ. 

ನಮ್ಮ ಚರಿತ್ರೆಯ ವಿಕಾಸದ ಹಂತದ ಸಮಯವನ್ನು ನೋಡಿದರೆ, ಒಂದು ಗುಂಪಿನ ಜನರು ಜೀವಿಸುವ ಸಾಧ್ಯತೆಗಳು
ಹೆಚ್ಚಬೇಕಾದರೆ, ಆ ಗುಂಪಿನ ಸದಸ್ಯರು ಪ್ರಪಂಚವನ್ನು ವಿಭಿನ್ನ ರೀತಿಗಳಲ್ಲಿ ನೋಡಬೇಲಾಗಿತ್ತದೆ. ಉದಾಹರಣೆಗೆ ಕೆಲವು ಮಂದಿ ಅತ್ಯುತ್ತಮ ವಾದ್ಯ ಉಪಕರಣಗಳನ್ನು ತಯಾರಿಸಬಹುದು. ಕೆಲವರು ಒಳ್ಳೆಯ ಬೇಟೆಗಾರರಿರಬಹುದು. ಕೆಲವರು ಮುಂದೆ ಬರುವ ಅಪಾಯಗಳನ್ನು ಗಮನಿಸುವುದರಲ್ಲಿ ಚತುರರಿರಬಹುದು, ದೀರ್ಘಕಾಲದ ಚಳಿಗಾಲವನ್ನು ನಿಭಾಯಿಸಲು ಯೋಜನೆಗಳನ್ನು ಹಾಕಿ ಅದನ್ನು ಅನುಸರಿಸುವ ನೀತಿಯನ್ನು ಸಿದ್ಧಪಡಿಸುವಲ್ಲಿನ ಜಾಣತನ, ಮತ್ತೆ ಕೆಲವರಿಗೆ ಮುಂದಿನ ಪೀಳಿಗೆಗೆ ಮಾಹಿತಿಯನ್ನು ನೀಡಬಲ್ಲ ಕಥೆಗಳನ್ನು ಹೇಳುವಲ್ಲಿನ ಪ್ರೌಢಿಮೆ ಇರುವುದು. ಹಾಗಾಗಿ ಜೀವಿಸುವ ಸಲುವಾಗಿ, ನಮ್ಮ ಕಷ್ಟಕಾಲವನ್ನು ನಿಭಾಯಿಸಲು ನಮಗೆ ಯಥೇಚ್ಛವಾಗಿ ಬೇರೆ ಬೇರೆ ರೀತಿಯ ಬುದ್ಧಿವಂತಿಕೆಗಳ ಆವಶ್ಯಕತೆ ಇದೆ.

ಅನೇಕ ರೀತಿಯ ಬುದ್ಧಿವಂತಿಕೆಗಳು: Multiple Intelligence

೧) ಸಂಗೀತದ ಜ್ಞಾನ (Musical Intelligence)
೨) ದೃಶ್ಯೀಕರಿಸುವ ಬುದ್ಧಿವಂತಿಕೆ (Spatial Intelligence)
೩) ಮಾಡಿ ತೋರಿಸುವ ಕಲೆ, ಇಂತಹವರು ನೃತ್ಯ, ಕ್ರೀಡೆ, ನಟನೆಗಳಲ್ಲಿ ಉತ್ಸಾಹಿಗಳಾಗಿರುತ್ತಾರೆ (Bodily Kinesthetic
Intelligence)
೪) ಪ್ರಕೃತಿ, ಪ್ರಾಣಿಗಳ ಬಗ್ಗೆ ಸೂಕ್ಷ್ಮಮತಿಯುಳ್ಳವರು, ಇಲ್ಲಿ Charles Darwin ನನ್ನು
ನೆನಪಿಸಿಕೊಳ್ಳಬಹುದು (Naturalistic Intelligence)
೫) ದಿಕ್ಕುಗಳ ಬಗೆಗಿನ ಜ್ಞಾನ, ಎಲ್ಲೆಡೆ ಸಂಚರಿಸುವುದಕ್ಕೆ ಬೇಕಾಗುವ ಬುದ್ಧಿಶಕ್ತಿ (Navigational Intelligence)
೬) ಹೊಸ ರೀತಿಯಲ್ಲಿ ಯೋಚಿಸುವ, ಅಸಕ್ತಿಭರಿತ ಕಲ್ಪನೆಗೆ ಬೇಕಾಗುವ ಬುದ್ಧಿಶಕ್ತಿ (Creative Intelligence)
೭) ಮನುಷ್ಯ, ಪರಿಸರಗಳನ್ನು ಅರ್ಥೈಸಿಕೊಳ್ಳುವ ಬುದ್ಧಿವಂತಿಕೆ (Sensory Intelligence)
೮) ತಮ್ಮ ಮತ್ತು ಇತರರ ಭಾವನೆಗಳನ್ನು ಗುರುತಿಸಬಲ್ಲ ಬುದ್ಧಿವಂತಿಕೆ (Emotional Intelligence)
೯) ಅಪರೋಕ್ಷ ಜ್ಞಾನ (Intuitive Intelligence) – ಇದು ಎಲ್ಲಾ ಬುದ್ಧಿವಂತಿಕೆಗಳಿಗಿಂತ ಮಿಗಿಲಾದದ್ದು ಶ್ರೀ ರಾಘವೇಂದ್ರ
ಸ್ವಾಮಿಗಳ ಪರಮ ಗುರುಗಳಾದ ಶ್ರೀ ವಿಜಯೀಂದ್ರತೀರ್ಥರು (೧೫೧೪-೧೫೯೫), ಇವರು ೬೪ ವಿದ್ಯೆಗಳಲ್ಲಿ ಪಾರಂಗತರಾದ
ಮಹಾಮೇಧಾವಿ ಮೂರ್ಧನ್ಯರು. ನಿಮ್ಮ ಬುದ್ಧಿವಂತಿಕೆಗಳು ಯಾವುವು?
Hora: http://www.patreon.com/sustainablehuman

Comments

No comments yet. Why don’t you start the discussion?

Leave a Reply

Your email address will not be published. Required fields are marked *